ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023, ಹಾಗೂ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2023, ಇವುಗಳನ್ನು ಲೋಕಸಭೆಯಲ್ಲಿ ಅಂಗೀಕಾರಕ್ಕೆ ತರಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಮಸೂದೆ ಬಗ್ಗೆ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅಮಿತ್ ಶಾ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದಾಗಿ ಜಮ್ಮು ಮತ್ತು ಕಾಶ್ಮೀರ ಎರಡು ಪ್ರಮಾದಗಳನ್ನು ಅನುಭವಿಸಿದೆ. ನೆಹರು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರವು ಈಗ ಭಾರತದ ಭಾಗವಾಗುತ್ತಿತ್ತು. ಅವರು ಮಾಡಿದ್ದು ಐತಿಹಾಸಿಕ ಪ್ರಮಾದ ಎಂದು ಹೇಳಿದರು.
“ಜಮ್ಮು ಮತ್ತು ಕಾಶ್ಮೀರ ಎರಡು ಪ್ರಮಾದಗಳಿಂದ ಬಳಲುತ್ತಿದೆ. ಮೊದಲನೆಯದು ಕದನ ವಿರಾಮವನ್ನು ಘೋಷಿಸಿದ್ದು. ನಮ್ಮ ಸೈನ್ಯವು ಯುದ್ಧದಲ್ಲಿ ಗೆದ್ದಾಗ, ಕದನ ವಿರಾಮವನ್ನು ವಿಧಿಸಲಾಯಿತು. ಮೂರು ದಿನಗಳ ನಂತರ ಕದನ ವಿರಾಮ ಸಂಭವಿಸಿದ್ದರೆ, ಇಂದು ಪಿಒಕೆ ಭಾರತದ ಭಾಗವಾಗುತ್ತಿತ್ತು. ಎರಡನೆಯದು ನಮ್ಮ ಆಂತರಿಕ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ದರು” ಎಂದು ಅಮಿತ್ ಶಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹುಟ್ಟುವ ಮುನ್ನವೇ ಹೆಣ್ಣು ಜೀವಗಳನ್ನು ಬಲಿ ಪಡೆಯುತ್ತಿರುವ ಅನಾಗರಿಕ ವ್ಯವಸ್ಥೆ
“ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಶೂನ್ಯ ಭಯೋತ್ಪಾದಕ ಯೋಜನೆಯನ್ನು 3 ವರ್ಷಗಳವರೆಗೆ ಜಾರಿಯಲ್ಲಿಡಲು ಯೋಜಿಸಿದೆ. ಅಲ್ಲದೆ ಈಗ ಮಂಡಿಸಿರುವ ಮಸೂದೆಗಳು ತಮ್ಮ ಸ್ವಂತ ದೇಶದಲ್ಲಿ ನಿರಾಶ್ರಿತರಾಗಲು ಒತ್ತಾಯಿಸಲ್ಪಟ್ಟವರಿಗೆ ನ್ಯಾಯವನ್ನು ನೀಡಲು ಪ್ರಯತ್ನಿಸುತ್ತವೆ. ಹಕ್ಕುಗಳನ್ನು ನೀಡುವುದಕ್ಕೂ, ಗೌರವಯುತವಾಗಿ ಹಕ್ಕುಗಳನ್ನು ನೀಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ” ಎಂದು ಹೇಳಿದರು.
“ನಾನು ಇಲ್ಲಿ ಜಾರಿಗೊಳಿಸಿರುವ ಮಸೂದೆಯು ಯಾರ ವಿರುದ್ಧ ಅನ್ಯಾಯವಾಗಿದೆಯೋ, ಯಾರು ಅವಮಾನಿಸಲ್ಪಟ್ಟರು ಮತ್ತು ನಿರ್ಲಕ್ಷಿಸಲ್ಪಟ್ಟವರಿಗೆ ನ್ಯಾಯವನ್ನು ಒದಗಿಸುವುದಕ್ಕೆ ಈ ಹಕ್ಕುಗಳು ಸಂಬಂಧಿಸಿದೆ. ಯಾವುದೇ ಸಮಾಜದಲ್ಲಿ, ವಂಚಿತ ಸಮುದಾಯವನ್ನು ಮುಂದೆ ತರಬೇಕು. ಅದುವೇ ಭಾರತದ ಸಂವಿಧಾನದ ಮೂಲ ಅರ್ಥವಾಗಿದೆ. ವಂಚಿತರ ಗೌರವವನ್ನು ಕುಗ್ಗಿಸದ ರೀತಿಯಲ್ಲಿ ಅವರನ್ನು ಮುಂದೆ ತರಬೇಕು. ಹೀಗಾಗಿ ದುರ್ಬಲ ಮತ್ತು ವಂಚಿತ ವರ್ಗದ ಬದಲಿಗೆ ಅದನ್ನು ಇತರೆ ಹಿಂದುಳಿದ ವರ್ಗ ಎಂದು ಮರುನಾಮಕರಣ ಮಾಡುವುದು ಮುಖ್ಯ’’ ಎಂದರು.
ವಿಪಕ್ಷಗಳ ಸಭಾತ್ಯಾಗ
ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಸಮಸ್ಯೆಗೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಕಾರಣ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಪಕ್ಕೆ ಆಕ್ರೋಶಗೊಂಡ ವಿರೋಧ ಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು.