ಶೂದ್ರರು, ದಲಿತರಿಗೆ ಆರ್‌ಎಸ್‌ಎಸ್‌ ಗರ್ಭಗುಡಿಗೆ ಪ್ರವೇಶ ಇಲ್ಲ ಎಂಬುದು ಮತ್ತೆ ಸಾಬೀತು: ಸಿದ್ದರಾಮಯ್ಯ

Date:

Advertisements
  • ಹೊರಬಾಗಿಲಲ್ಲಿ ನಿಂತು ‘ಜೀ..ಜೀ..ಹುಜೂರ್’ ಎಂದಷ್ಟೇ ಹೇಳಬೇಕು:‌ ಸಿದ್ದರಾಮಯ್ಯ
  • ಗೂಳಿಹಟ್ಟಿ ಶೇಖರ್ ಅವರ ಆರೋಪ ನಿರಾಧಾರದ, ಹುರುಳಿಲ್ಲದ ಆರೋಪ: ಆರ್‌ಎಸ್‌ಎಸ್

ಶೂದ್ರರು ಮತ್ತು ದಲಿತರಿಗೆ ಆರ್.ಎಸ್.ಎಸ್ ಗರ್ಭಗುಡಿಗೆ ಪ್ರವೇಶ ಇಲ್ಲ, ಅವರೇನಿದ್ದರೂ ಹೊರಬಾಗಿಲಲ್ಲಿ ನಿಂತು ‘ಜೀ..ಜೀ..ಹುಜೂರ್’ ಎಂದಷ್ಟೇ ಹೇಳಬೇಕು. ಇದಕ್ಕೆ ಬಿಜೆಪಿಯ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಿ.ಎಲ್ ಸಂತೋಷ್‌ ಅವರಿಗೆ ಕಳುಹಿಸಿರುವ ವಾಟ್ಸಾಪ್ ವಾಯ್ಸ್ ರೆಕಾರ್ಡ್ ಸಾಕ್ಷಿ ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

ಎಕ್ಸ್‌ ತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಬಿಜೆಪಿ ಮತ್ತು ಆರ್.ಎಸ್.ಎಸ್ ಪರಿವಾರ ಬಹಿರಂಗವಾಗಿ ಮುಸ್ಲಿಮರ ವಿರುದ್ಧ ಮಾತ್ರ ಹರಿಹಾಯ್ದರೂ ಅಂತರಂಗದಲ್ಲಿ ಅದು ಶೂದ್ರರು ಮತ್ತು ದಲಿತರ ವಿರುದ್ಧವಾಗಿದೆ. ಬಾಯಿಯಲ್ಲಿ ಹಿಂದೂ ನಾವೆಲ್ಲರೂ ಒಂದು ಎನ್ನುವ ಮಂತ್ರವನ್ನು ಸದಾ ಪಠಿಸುವ ಸಂಘ ಪರಿವಾರದ ನಾಯಕರು ಶೂದ್ರರು ಮತ್ತು ದಲಿತರನ್ನು ಬಡಿಯಲು ಕಂಕುಳಲ್ಲಿ ಬಡಿಗೆ ಇಟ್ಟುಕೊಂಡಿರುತ್ತಾರೆ” ಎಂದು ತಿವಿದಿದ್ದಾರೆ.

“ಗೂಳಿಹಟ್ಟಿ ಶೇಖರ್ ಅವರಂತಹ ದಲಿತ ಸಮುದಾಯದ‌ ನಾಯಕರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆ ಮತ್ತು ಸಂವಿಧಾನ ಮಾತ್ರ ರಕ್ಷಣೆ ನೀಡಬಹುದೇ ಹೊರತು ಸಂಘ ಪರಿವಾರದ ಸಾವರ್ಕರ್, ಗೋಲ್ವಾಲ್ಕರ್ ಚಿಂತನೆಗಳಲ್ಲ. ಶೇಖರ್ ಅವರು ತನ್ನ ಅನುಭವದಿಂದ ಪಾಠ ಕಲಿಯಲಿ ಎಂದು ಹಾರೈಸುತ್ತೇನೆ” ಎಂದು ಹೇಳಿದ್ದಾರೆ.

Advertisements

“ಸಂವಿಧಾನ ಜಾರಿಯಾಗಿ 7 ದಶಕಗಳು ಕಳೆದಿದೆ. ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬದಲಾಗಿದೆ ಹಾಗಾಗಿ ಇನ್ನೆಷ್ಟು ವರ್ಷ ಮೀಸಲಾತಿ ಕೊಡಬೇಕು ಎಂದು ಪ್ರಶ್ನಿಸುತ್ತಿದ್ದವರು ಇಂದು ಗೂಳಿಹಟ್ಟಿ ಶೇಖರ್ ಅವರಿಗಾದ ಅವಮಾನದ ಹೊಣೆ ಹೊರುವರೇ? ಇದೇ ಕಾರಣಕ್ಕೆ ನಾನು ಹಿಂದೆ ನೂರು ಬಾರಿ ಹೇಳಿದ್ದೇನೆ, ಈಗ ಮತ್ತೆ ಹೇಳುತ್ತೇನೆ ‘ಎಲ್ಲಿಯವರೆಗೆ ಜಾತೀಯತೆ, ಅಸ್ಪೃಶ್ಯತೆ ಜೀವಂತವಾಗಿರುತ್ತದೆ ಅಲ್ಲಿಯವರೆಗೆ ಮೀಸಲಾತಿ ವ್ಯವಸ್ಥೆ ಇರಬೇಕು’. ಜಾತೀಯತೆಯನ್ನು ತೊಡೆದು ಹಾಕಲು ಮೀಸಲಾತಿಯೂ ಒಂದು ಪ್ರಬಲ ಅಸ್ತ್ರ” ಎಂದು ಪ್ರತಿಪಾದಿಸಿದ್ದಾರೆ.

“ಆರ್.ಎಸ್.ಎಸ್ ಸ್ಥಾಪನೆಯಾಗಿ ಇನ್ನೆರಡು ವರ್ಷಕ್ಕೆ ನೂರು ವರ್ಷಗಳಾಗುತ್ತದೆ. ಈವರೆಗೆ ಒಬ್ಬನೇ ಒಬ್ಬ ತಳ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಆರ್.ಎಸ್.ಎಸ್ ತನ್ನ ‌ಸರಸಂಘಚಾಲಕ ಇಲ್ಲವೇ ಇತರ ಉನ್ನತ ಪದಾಧಿಕಾರಿಯಾಗಿ ಯಾಕೆ ನೇಮಿಸಿಲ್ಲ ಎಂದು ನಾನು ಪ್ರಶ್ನೆ ಮಾಡಿದ್ದಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದವರು, ಎದೆ ಬಡಿದುಕೊಂಡು ನನ್ನ ಮೈಮೇಲೆ ಎರಗಿದರು, ಅಪಪ್ರಚಾರದ ಮೂಲಕ ನನ್ನ ನಿಂದನೆ ಮಾಡಿದರು. ಈಗ ಗೂಳಿಹಟ್ಟಿ ಶೇಖರ್ ಅವರಿಗೆ ಆಗಿರುವ ಅವಮಾನ ಮತ್ತು ಅನ್ಯಾಯಕ್ಕೆ ಉತ್ತರಿಸುವ ಧೈರ್ಯ ತೋರುವರೇ” ಎಂದು ಪ್ರಶ್ನಿಸಿದ್ದಾರೆ.

“’ಹಿಂದುಗಳೆಲ್ಲ ಒಂದು’ ಎನ್ನುವ ಘೋಷಣೆ ಪ್ರಾಮಾಣಿಕತೆಯಿಂದ ಕೂಡಿದ್ದರೆ, ಮೊದಲು ಆರ್.ಎಸ್.ಎಸ್ ಸರಸಂಘಚಾಲಕ ಹುದ್ದೆಗೆ ಒಬ್ಬ ದಲಿತನನ್ನು ನೇಮಕ‌ ಮಾಡಬೇಕು. ಇಲ್ಲದೆ ಇದ್ದರೆ ಈ ರೀತಿ ‘ಹಿಂದೂ..ಒಂದು’ ಎಂದು ಸುಳ್ಳು ಹೇಳಿ ಜನರನ್ನು ನಂಬಿಸಿ‌ ಮೋಸಮಾಡುವುದನ್ನು ನಿಲ್ಲಿಸಬೇಕು.”

”ತನ್ನ ‘ಹೊಡಿ ಬಡಿ’ ರಾಜಕಾರಣ ಮತ್ತು ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಹಣಿಯಲು ಶೂದ್ರ ಮತ್ತು ದಲಿತ ಸಮುದಾಯದ ಅಮಾಯಕರನ್ನು ಯಥೇಚ್ಚವಾಗಿ ಬಳಸುವ ಸಂಘ ಪರಿವಾರ, ಅವಕಾಶಗಳನ್ನು‌ ನೀಡುವ ಸಮಯ ಬಂದಾಗ ಮನೆ ಗೇಟ್‌ನಿಂದ ಹೊರಗೆ ಇಡುತ್ತಾ ಬಂದಿದೆ. ಶೂದ್ರ ಮತ್ತು‌ ದಲಿತ ಸಮುದಾಯ ಈಗಲಾದರೂ ಕಣ್ತೆರೆದು ಈ ನಗ್ನ ಸತ್ಯವನ್ನು ಅರಿತುಕೊಳ್ಳಲಿ” ಎಂದು ಕಿವಿಮಾತು ಹೇಳಿದ್ದಾರೆ.

ಆರ್‌ಎಸ್‌ಎಸ್‌ನ  ನಾ. ತಿಪ್ಪೇಸ್ವಾಮಿ ಸ್ಪಷ್ಟನೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಂಗಳೂರು ದಕ್ಷಿಣ-ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದು, “ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಆರೋಪ ನಿರಾಧಾರದ ಹಾಗೂ ಹುರುಳಿಲ್ಲದ ಆರೋಪ” ಎಂದಿದ್ದಾರೆ.

“ಆಡಿಯೋ ಹೇಳಿಕೆಯಲ್ಲಿ ‘ತಮಗೆ ಜಾತಿ ಕಾರಣಕ್ಕೆ ನಾಗಪುರದ ಡಾ. ಹೆಡಗೇವಾರ್ ಸ್ಮಾರಕ ಕಟ್ಟಡದಲ್ಲಿ ಪ್ರವೇಶ ನಿರಾಕರಿಸಲಾಯಿತು’ ಎಂದು ಆರೋಪಿಸಿದ್ದಾರೆ. ನಾಗಪುರದಲ್ಲಿ ಸಂಘ ಕಾರ್ಯಾಲಯವನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಇದೊಂದು
ಆರೆಸ್ಸೆಸ್‌ನ ಯಾವುದೇ ಕಚೇರಿಯಲ್ಲಾಗಲಿ, ಅಥವಾ ಈ ರೀತಿಯ ಸ್ಮಾರಕ ಕಟ್ಟಡಗಳಲ್ಲಾಗಲಿ, ಎಲ್ಲರಿಗೂ ಮುಕ್ತ ಪ್ರವೇಶವಿದೆ. ಎಲ್ಲಾ ಜಾತಿ, ವರ್ಗದ ಸಾವಿರಾರು ಜನ ನಿತ್ಯ ಬಂದು ಹೋಗುತ್ತಲೇ ಇದ್ದಾರೆ. ಯಾರಿಗೂ ಪ್ರವೇಶ ನಿರಾಕರಣೆಯ ಪ್ರಶ್ನೆಯೇ ಬಂದಿಲ್ಲ” ಎಂದಿದ್ದಾರೆ.

“ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಮೊದಲು ಈ ಘಟನೆ ನಡೆದಿತ್ತು ಎನ್ನುವ ಗೂಳಿಹಟ್ಟಿ ಶೇಖರ್ ಅವರು ಆನಂತರ ಅನೇಕ ಸಂಘದ ಪ್ರಮುಖರನ್ನು ಭೇಟಿಯಾದರೂ ಎಲ್ಲಿಯೂ ತಮಗಾದ ಈ ‘ಅವಮಾನ’ದ ಬಗ್ಗೆ ಹೇಳಿರಲಿಲ್ಲ. ಈಗ ಹತ್ತು ತಿಂಗಳ ನಂತರ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲರನ್ನೂ ಸದಾ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ” ಎಂದು ತಿಳಿಸಿದ್ದಾರೆ.

 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

Download Eedina App Android / iOS

X