ಸುಸ್ಥಿರ, ಉತ್ತಮ ಜೀವನೋಪಾಯಕ್ಕಾಗಿ ಜೀವವೈವಿಧ್ಯತೆಯ ಜ್ಞಾನವನ್ನು ಹೊಂದಿರುವುದು ಬಹಳ ಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಭಿಪ್ರಾಯ ಪಟ್ಟರು.
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಔಷಧಿ ಗಿಡಮೂಲಿಕೆ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ, ಚಿತ್ರದುರ್ಗ ಅರಣ್ಯ ವಿಭಾಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಔಷಧಿ ಸಸ್ಯ ಹಾಗೂ ಜೀವವೈವಿದ್ಯದ ಕುರಿತು ವಿಭಾಗ ಮಟ್ಟದ ಅರಣ್ಯ ಅಧಿಕಾರಿಗಳ ಮತ್ತು ಮುಂಚೂಣಿ ಸಿಬ್ಬಂದಿಯ ಸಾಮಥ್ಯ ವರ್ಧನೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜೀವವೈವಿಧ್ಯವು ಭೂಮಿಯ ಮೇಲಿನ ಜೀವನದ ಶ್ರೀಮಂತಿಕೆ ಮತ್ತು ವೈವಿಧ್ಯತೆ ವಿವರಿಸುತ್ತದೆ. ಇದು ನಮ್ಮ ಗ್ರಹದ ಅತ್ಯಂತ ಸಂಕೀರ್ಣ ಮತ್ತು ಪ್ರಮುಖ ಲಕ್ಷಣವಾಗಿದೆ. ಜೀವವೈವಿಧ್ಯವಿಲ್ಲದೇ ಜೀವನ ಉಳಿಯುವುದಿಲ್ಲ. ಜೀವವೈವಿಧ್ಯವು ಪರಿಸರ ಮತ್ತು ಆರ್ಥಿಕ ಮಹತ್ವವನ್ನು ಹೊಂದಿದೆ. ಇದು ನಮಗೆ ಪೋಷಣೆ, ವಸತಿ, ಇಂಧನ, ಬಟ್ಟೆ ಮತ್ತು ಹಲವಾರು ಇತರ ಸಂಪನ್ಮೂಲಗಳನ್ನು ಒದಗಿಸುತ್ತದೆ. ಇದು ಪ್ರವಾಸೋದ್ಯಮದ ಮೂಲಕ ವಿತ್ತೀಯ ಪ್ರಯೋಜನಗಳನ್ನು ಹೊರತೆಗೆಯುತ್ತದೆ.
ಚಿತ್ರದುರ್ಗ ಜಿಲ್ಲೆಯು ಜೀವವೈವಿದ್ಯತೆ ಹೊಂದಿದೆ. ಹಲವಾರು ಔಷಧಿಯ ಸಸ್ಯಗಳು, ಕುರುಚಲು ಸಸ್ಯವರ್ಗ, ದಟ್ಟ ಅರಣ್ಯ ಇವೆ. ಇವೆಲ್ಲವನ್ನೂ ಸಂರಕ್ಷಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ ಮಾತನಾಡಿ, ಜೀವವೈವಿಧ್ಯತೆ ಸಂರಕ್ಷಿಸುವ ಅಗತ್ಯತೆ ಕುರಿತು ಕರೆ ನೀಡಿದರು. ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಮಾತನಾಡಿ, ಹಲವಾರು ಔಷಧಿಯ ಸಸ್ಯಗಳು ಅಳಿವಿನಂಚಿಗೆ ತಲುಪಿದ್ದು ಅವುಗಳನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು.
ಆಯುಷ್ ವಿಭಾಗದ ವೈದ್ಯಾಧಿಕಾರಿ ಡಾ.ಟಿ.ಶಿವಕುಮಾರ್ ಅವರು ಜೋಗಿಮಟ್ಟಿ ಅರಣ್ಯದಲ್ಲಿ ಬರುವ ಔಷಧಿಯ ಸಸ್ಯಗಳ ಪರಿಚಯ ಮಾಡಿಕೊಟ್ಟರು. ಸಂಪನ್ಮೂಲ ವ್ಯಕ್ತಿ ಡಾ.ನಿರಂಜನ್ ಅವರು ಆಡುಮಲ್ಲೇಶ್ವರ ಸ್ಥಳದ ಸುತ್ತಮುತ್ತಲಿರುವ ಔಷಧಿಯ ಸಸ್ಯಗಳ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ಜೀವವೈವಿದ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಜಗತ್ ರಾಮ್, ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎ.ಸುದರ್ಶನ್, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜೆ.ಗೋವರ್ಧನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ, ಬಳ್ಳಾರಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಮತ್ತಿತರರು ಉಪಸ್ಥಿತರಿದ್ದರು.