ಭಾರತದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ 67ನೇ ಮಹಾ ಪರಿನಿರ್ವಾಣದ ನಿಮಿತ್ತ ದಲಿತ ಸಮರ ಸೇನೆ ಕರ್ನಾಟಕ ವಿಜಯಪುರ ಜಿಲ್ಲಾ ಶಾಖೆಯ ಕೇಂದ್ರ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಡಿಎಸ್ಎಸ್ ಅಧ್ಯಕ್ಷ ಗೌಡಪ್ಪಬಸಪ್ಪ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸರ್ವ ಜನಾಂಗದ ಹಕ್ಕುಗಳಿಗಾಗಿ ಹೋರಾಡಿದ ಮಾನವ ಹಕ್ಕುಗಳ ಹೋರಾಟಗಾರ. ಮಹಾನ್ ಮಾನವತಾವಾದಿ. ಅವರು ಕೇವಲ ಒಂದು ಸಮುದಾಯ ಒಂದು ಜನಾಂಗದ ಹಕ್ಕುಗಳಿಗಾಗಿ ಹೋರಾಡಿದವರಲ್ಲ. ಅವರು ಸರ್ವ ಜನಾಂಗದ ಹಕ್ಕುಗಳಿಗಾಗಿ ಶ್ರಮಿಸಿ ಸಂವಿಧಾನ ಬದ್ಧ ಹಕ್ಕುಗಳನ್ನು ಕೊಟ್ಟವರು. ಇಂತಹ ಮಹಾನ್ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರನ್ನು ಸಂಕುಚಿತಗೊಳಿಸುತ್ತಿರುವುದು ಮತ್ತು ಮೀಸಲಾತಿ ವಿಷಯಕ್ಕೆ ಮಾತ್ರ ಸೀಮಿತಗೊಳಿಸುತ್ತಿರುವುದು ತುಂಬಾ ವಿಷಾದಕರ ಸಂಗತಿ ಎಂದು ಹೇಳಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಕೊಡುಗೆ ಕೇವಲ ಮೀಸಲಾತಿಯದ್ದಲ್ಲ. ಅವರು ಕೃಷಿಗಾಗಿ, ದೇಶದ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾದ ದಾಮೋದರ್ ಕಣಿವೆ ಆಣೆಕಟ್ಟು, ಸೋನೆ ನದಿ ಅಣೆಕಟ್ಟು, ದೇಶದ ಅತಿ ಉದ್ದದ ಆಣೆಕಟ್ಟು ಆದ ಹಿರಾಕುಡ್ ಅಣೆಕಟ್ಟು, ಅತಿ ದೊಡ್ಡ ವಿವಿಧೋದ್ದೇಶ ಆಣೆಕಟ್ಟು ಆದ ಬಾಕ್ರಾನಂಗಲ್ ಆಣೆಕಟ್ಟು, ಮಹಿಳೆಯರಿಗಾಗಿ ಮೀಸಲಾತಿ, ಹೆರಿಗೆ ರಜೆ ಮತ್ತು ಆರೋಗ್ಯವಿಮೆಗಳನ್ನು ತಂದರು.
ಕಾರ್ಮಿಕರಿಗಾಗಿ ವಿಮಾ ಯೋಜನೆಗಳನ್ನು ಹಾಗೂ ಅನಿಯಂತ್ರಿತವಾಗಿ ದುಡಿಯಬೇಕಿದ್ದ ಕಾರ್ಮಿಕರನ್ನು ಎಂಟು ಗಂಟೆ ಕೆಲಸ, ಎಂಟು ಗಂಟೆ ವಿಶ್ರಾಂತಿ, ಎಂಟು ಗಂಟೆ ನಿದ್ರೆ ಹೀಗೆ ಕಾರ್ಮಿಕರ ಹಿತರಕ್ಷಣೆ, ದೇಶದ ಅರ್ಥ ವ್ಯವಸ್ಥೆಯ ಸ್ಥಂಭವಾದ ಆರ್‌ಬಿಐನ ಸ್ಥಾಪನೆ ಮತ್ತು ಪ್ರತಿ 10 ವರ್ಷಗಳಿಗೊಮ್ಮೆ ರೂಪಾಯಿಗಳ ಅಪಮೌಲ್ಯಿಕರಣ ಹೀಗೆ ಎಣಿಕೆಗೆ ಮೀರಿದ ಕೊಡುಗೆಗಳ ಮೂಲಕ ಈ ದೇಶಕ್ಕಾಗಿ ತಮ್ಮ ಉಸಿರಿರುವ ವರೆಗೂ ಶ್ರಮಿಸಿದ ಮಹಾನ್ ನಾಯಕ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಅವರ ವಿಚಾರಗಳನ್ನು ಪ್ರತಿಮೆಗಳಲ್ಲಿ ಅಲ್ಲ, ಪುಸ್ತಕಗಳಲ್ಲಿವೆ ಎಂದು ಅವರು ಹೇಳಿದರು.
ದೇವರ ಹಿಪ್ಪರಗಿ ಠಾಣೆಯ ಆರಕ್ಷರಾದ ಕಿರಣ್ ಕುಮಾರ್, ಬಾಬಾ ಸಾಹೇಬರ ಕುರಿತು ಅಧ್ಯಯನ ಮಾಡುವುದು ಎಂದರೆ ಕೊನೆಯಿಲ್ಲದ ಅಧ್ಯಯನವಾಗಿದೆ. ಅವರ ವಿಚಾರಗಳು ನಿತ್ಯ ನೂತನವಾಗಿವೆ. ನಾವು ಜ್ಞಾನದ ಮೂಲಕ ಅವರ ವಿಚಾರಗಳನ್ನು ಬೆಳಗಬೇಕಾಗಿದೆ ಎಂದರು. ಜಿಲ್ಲಾ ಸಂಚಾಲಕರಾದ ಅಮೃತ್ ಅವರು ವಿಶ್ವ ಭಾರತವನ್ನು ಗುರುತಿಸುವುದು ನಮ್ಮ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಮನಿಸಿ. ಅಂತಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಪಿಸಿದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ಹಾಗೆಯೇ ಈ ದೇಶದಲ್ಲಿ ಮಹಿಳಾ ಹಕ್ಕುಗಳಿಗಾಗಿ ಮೊಟ್ಟ ಮೊದಲು ಹೋರಾಡಿದವರೆಂದರೆ ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಶಿಕ್ಷಣಕ್ಕೆ ಮೂಲ ಬುನಾದಿ ಹಾಕಿದವರು ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಗಳಾದ ಸುನೀಲ್ ಕಳಸರೇಡ್ಡಿ ರವರು, ಪ್ರಜ್ವಲ್ ರವರು, ಕೀರಣ್ ರವರು ಬಾಬಾ ಸಾಹೇಬರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.