ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳ ಸಂಚಾರ ನಿಯಮ ಉಲ್ಲಂಘನೆ ಕಳೆದ ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ವರ್ಷ ಪ್ರಮಾಣ ಕಡಿಮೆಯಾಗಿದೆ. ಆದರೆ, ಅಪಘಾತಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಇನ್ನು ಕೆಎಸ್ಆರ್ಟಿಸಿಗಿಂತ ಬಿಎಂಟಿಸಿ ಬಸ್ ಹೆಚ್ಚು ಸಂಚಾರ ನಿಯಮ ಉಲ್ಲಂಘಿಸಿವೆ.
ಸಂಚಾರ ನಿಯಮ ಉಲ್ಲಂಘನೆ, ಅಪಘಾತಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಬಿಎಂಟಿಸಿ ಚಾಲನಾ ಸಿಬ್ಬಂದಿಗೆ ಪೊಲೀಸ್ ಟ್ರಾಫಿಕ್ ಕಮಾಂಡ್ ಸೆಂಟರ್ ಸಂಚಾರ ನಿಯಮ ಪಾಲನೆ ತರಬೇತಿಯನ್ನು ಸೋಮವಾರ ಆರಂಭಿಸಿದೆ. ಪ್ರತಿದಿನ 50 ಚಾಲಕರಂತೆ ಡಿಸೆಂಬರ್ 30ರ ವರೆಗೆ ಟ್ರಾಫಿಕ್ ಕಮಾಂಡ್ ಸೆಂಟರ್‌ನಲ್ಲಿ ಈ ತರಬೇತಿ ನಡೆಯಲಿದೆ.
ಬಿಎಂಟಿಸಿ ಸಂಸ್ಥೆಯಲ್ಲಿ ಒಟ್ಟು 30 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 25 ಸಾವಿರ ಚಾಲನಾ ಸಿಬ್ಬಂದಿ ಇದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ನಗರದಲ್ಲಿ ಉಂಟಾಗುವ ಹಲವು ಅಪಘಾತಗಳಿಗೆ ಕಾರಣವಾಗಿದೆ. ಅಲ್ಲದೇ, ಸಂಚಾರ ನಿಯಮ ಉಲ್ಲಂಘನೆಯಿಂದಾಗಿ ಸಂಸ್ಥೆ ಕೋಟ್ಯಂತರ ರೂಪಾಯಿ ದಂಡ ಕಟ್ಟಿದೆ.
ಚಾಲಕರ ನಿರ್ಲಕ್ಷವೇ ಸಂಚಾರ ನಿಯಮ ಉಲ್ಲಂಘನೆ ಹಾಗೂ ಬಸ್ ಅಪಘಾತಕ್ಕೆ ಕಾರಣ ಎಂಬುದು ಬಯಲಾಗಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕೊಂಚ ಹೆಚ್ಚಳವಾಗುತ್ತಿದೆ. 2023ರ ಒಂದೇ ವರ್ಷದಲ್ಲಿ 34 ಜನರು ಬಿಎಂಟಿಸಿ ಬಸ್‌ಗೆ ಬಲಿಯಾಗಿದ್ದಾರೆ.
ಬಸ್ ಅಪಘಾತ
ಈ ವರ್ಷ(2023) ಬಿಎಂಟಿಸಿ ಬಸ್ ಅಪಘಾತದಿಂದ 34 ಜನ ಸಾವನ್ನಪ್ಪಿದ್ದು, 97 ಜನ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅದೇ ರೀತಿ ಈ ವರ್ಷ ಕೆಎಸ್‌ಆರ್‌ಟಿಸಿಯಿಂದ 10 ಜನ ಸಾವನ್ನಪ್ಪಿದ್ದರೆ, 28 ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
2020ರಲ್ಲಿ ಬಿಎಂಟಿಸಿ ಬಸ್‌ಗೆ 22 ಜನರು ಬಲಿಯಾಗಿದ್ದು, 49 ಜನರು ಗಾಯಗೊಂಡಿದ್ದಾರೆ. 2021ರಲ್ಲಿ 27 ಜನರು ಸಾವನ್ನಪ್ಪಿದ್ದರೆ, 58 ಜನರು ಗಾಯಗೊಂಡಿದ್ದಾರೆ. 2022ರಲ್ಲಿ 37 ಜನರು ಬಲಿಯಾಗಿದ್ದರೆ, 85 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಿಯಮ ಉಲ್ಲಂಘಣೆ
ಬಿಎಂಟಿಸಿ 2023ರಲ್ಲಿ 13,917 ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು, ಬರೋಬ್ಬರಿ ₹1,04 ಕೋಟಿ ದಂಡ ಕಟ್ಟಿದೆ. ಕೆಎಸ್‌ಆರ್‌ಟಿಸಿ 3,347 ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು, ₹14 ಲಕ್ಷ ದಂಡ ಪಾವತಿಸಿದೆ.
2022ರಲ್ಲಿ 32,066 ಪ್ರಕರಣಗಳಿಂದ ₹2.39 ಕೋಟಿ ದಂಡ ಸಂಗ್ರಹಿಸಲಾಗಿತ್ತು. ಅದೇ ರೀತಿ 2021ರಲ್ಲಿ 18,946 ಪ್ರಕರಣ ದಾಖಲಾಗಿದ್ದರೆ, ₹1.46 ಕೋಟಿ ದಂಡ ವಸೂಲಿ ಮಾಡಲಾಗಿತ್ತು. ಅದೇ ರೀತಿ ಸಾವಿರಾರು ಉಲ್ಲಂಘನೆ ಪ್ರಕರಣಗಳಿಂದ ಕೋಟ್ಯಂತರ ರೂಪಾಯಿ ದಂಡದ ಹಣ ಬಾಕಿ ಉಳಿದಿದೆ.
2022ರಲ್ಲಿ 17,664 ಪ್ರಕರಣಗಳಿಂದ ₹6.83 ಕೋಟಿ ದಂಡ ಹಾಗೂ 2021ರಲ್ಲಿ 10,689 ಕೇಸ್ ಗಳಿಂದ ₹57 ಲಕ್ಷ ದಂಡ ವಸೂಲಿ ಬಾಕಿಯಿದೆ ಎಂದು ಸಂಚಾರ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಶಿಸ್ತುಪಥ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್‌ನಲ್ಲಿ ಬಸ್ ನಿಲುಗಡೆ ಸೇರಿದಂತೆ ಹಲವು ಸಂಚಾರ ನಿಯಮ ಉಲ್ಲಂಘನೆ ಮಾಡಿವೆ. ಈ ಬಗ್ಗೆ ದಂಡ ಪಾವತಿ ಮಾಡುವಂತೆ ಸಾರಿಗೆ ಇಲಾಖೆಗೆ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಪತ್ರ ಬರೆದಿತ್ತು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಸೈಟ್ ಕೊಡಿಸುವುದಾಗಿ ಎನ್ಆರ್ಐಗೆ ₹30 ಲಕ್ಷ ವಂಚನೆ: ಟ್ವೀಟ್ ಮೂಲಕ ನಗರ ಪೊಲೀಸ್ ಕಮೀಷನರ್ಗೆ ದೂರು
ಈ ಬಗ್ಗೆ ಮಾತನಾಡಿದ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್, “ಅಪಘಾತ ಮತ್ತು ಸಂಚಾರ ನಿಯಮ ಉಲ್ಲಂಘನೆಗಳಿಗೆ ಚಾಲಕರ ಬೇಜಾವಾಬ್ದಾರಿತನ ಕಾರಣ. ಸಂಚಾರ ನಿಯಮ ಉಲ್ಲಂಘಿಸದಂತೆ ಈಗಾಗಲೇ ತಿಳಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಬಸ್ ಚಾಲಕರಿಗೂ ಸಂಚಾರ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ, ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ, ಚಾಲಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಬಿಎಂಟಿಸಿ ಬಸ್‌ಗಳು ಹೆಚ್ಚಾಗಿ ಸಿಗ್ನಲ್ ಜಂಪ್ ಮಾಡಿವೆ” ಎಂದು ತಿಳಿಸಿದ್ದಾರೆ.