ಚಿಟಗುಪ್ಪ ತಾಲೂಕಿನ ಬೇಮಳಖೇಡದಿಂದ ಕರಕನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಆಮೆಗತಿಯಲ್ಲಿ ಸಾಗುತ್ತಿದೆ.
ರಸ್ತೆ ಅಗೆದು ಜೆಲ್ಲಿ ಕಲ್ಲು, ಕೆಂಪು ಮಣ್ಣು ಹಾಕಿದ ಪರಿಣಾಮ ಪ್ರಯಾಣಿಕರು, ಗ್ರಾಮಸ್ಥರು ನಿತ್ಯ ಧೂಳಿನಲ್ಲಿ ಓಡಾಡುವಂತಾಗಿದೆ ಎಂದು ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೀದರ್ ದಕ್ಷಿಣ ಕ್ಷೇತ್ರದ ಬೇಮಳಖೇಡದಿಂದ ಕರಕನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆದ ಸುಮಾರು 3 ಕಿ.ಮೀ. ರಸ್ತೆ ಕಾಮಗಾರಿಗಾಗಿ ಅಗೆದಿದ್ದಾರೆ. ಆದರೆ ರಸ್ತೆ ಕಾಮಗಾರಿ ಇನ್ನೂ ನಿರ್ಮಾಣ ಹಂತದಲ್ಲಿಯೇ ಇರುವುದರಿಂದ ಸದ್ಯಕ್ಕಂತೂ ಕಾಮಗಾರಿ ಪೂರ್ಣಗೊಳಿಸುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಉಡಮನಳ್ಳಿ, ಕರಕನಳ್ಳಿ ಗ್ರಾಮಸ್ಥರಿಗೆ ಕೆಂಪು ಮಣ್ಣಿನ ಧೂಳು ನುಂಗುವುದು ಅನಿವಾರ್ಯವಾಗಿದೆ.

“ರಸ್ತೆಯುದ್ದಕ್ಕೂ ಅಲ್ಲಲ್ಲಿ ಜಲ್ಲಿ ಕಲ್ಲು ಹಾಕುವುದು, ಕೆಂಪು ಧೂಳು ಏಳಬಾರದೆಂದು ಆಗಾಗ ರಸ್ತೆಗೆ ನೀರು ಚೆಲ್ಲುವುದು ಬಿಟ್ಟರೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಮುಂದಾಗುತ್ತಿಲ್ಲ. ಈ ಬಗ್ಗೆ ಗುತ್ತಿಗೆದಾರರು ಮಾಹಿತಿ ನೀಡಲು ಲಭ್ಯವಿಲ್ಲ. ಕಾಮಗಾರಿ ಹೀಗೆ ಕುಂಟುತ್ತಾ ಸಾಗಲು ನಿಖರ ಕಾರಣಗಳೇನು ಎಂಬುದು ಗೊತ್ತಾಗುತ್ತಿಲ್ಲ. ಎಂದು ಉಡಮನಳ್ಳಿ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
“ಕಾಮಗಾರಿ ಶುರುವಾಗಿ ವರ್ಷ ಕಳೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ರಸ್ತೆ ಪಕ್ಕದಲ್ಲಿರುವ ಮನೆಗಳಿಗೆ ಧೂಳು ತುಂಬುತ್ತಿದ್ದು ವೃದ್ಧರು, ಮಕ್ಕಳು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಧೂಳಿನಿಂದ ತೊಗರಿ, ಕಬ್ಬು ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಈ ಬಗ್ಗೆ ಸ್ಥಳೀಯ ಶಾಸಕರಿಗೆ, ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರಿಂದ ಗ್ರಾಮಸ್ಥರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೆತುಕೊಂಡು ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹಣಮಂತ ಮಾಳಗಿಮನಿ ಈದಿನ.ಕಾಮ್ ದೊಂದಿಗೆ ಮಾತನಾಡುತ್ತಾ ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥ ಶ್ರೀಮಂತ ಈದಿನ.ಕಾಮ್ ದೊಂದಿಗೆ ಮಾತನಾಡಿ, “ರಸ್ತೆ ನಿರ್ಮಾಣಕ್ಕಾಗಿ ಬೇಕಾಬಿಟ್ಟಿಯಾಗಿ ರಸ್ತೆ ಅಗಲೀಕರಣ ಮಾಡಿದ್ದಾರೆ. ಆದರೆ ಕಾಮಗಾರಿ ಮುಗಿಸದೇ ಹಾಗೇ ಬಿಟ್ಟ ಪರಿಣಾಮ ಗ್ರಾಮಸ್ಥರು ಹೈರಾಣಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಬಗ್ಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಇದೇ ರಸ್ತೆ ಮಧ್ಯೆ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದ ಕಾರಣ ಮಳೆಗಾಲದಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮಸ್ಥರ ಮನವಿಗೆ ಈಗಲಾದರೂ ಶಾಸಕರು ಗಮನಹರಿಸಿ ಕಾಮಗಾರಿ ಬೇಗ ಪೂರ್ಣಗೊಳಿಸಲು ಸೂಚಿಸಬೇಕು” ಎಂದು ಆಗ್ರಹಿಸಿದರು.
ತೆಲಂಗಾಣ ಗಡಿ ಹಂಚಿಕೊಂಡಿರುವ ಉಡಮನಳ್ಳಿ ಗ್ರಾಮದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದ ಪರಿಣಾಮ ರೈತರ ಬೆಳೆಗಳು ಸಂಪೂರ್ಣ ಹಾಳಾಗಿವೆ, ಯೋಗ್ಯವಲ್ಲದ ರಸ್ತೆ ಮೇಲೆ ಓಡಾಡಲು ವಾಹನ ಸವಾರರು ಪರಡಾಡುವಂತಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಎಸಿಸಿ ಸಿಮೆಂಟ್ ಕಾರ್ಖಾನೆ ಇಂಜಿನಿಯರ್ ಆತ್ಮಹತ್ಯೆ
ಈ ಬಗ್ಗೆ ಲೋಕೋಪಯೋಗಿ ಇಲಾಖೆ ಎಇಇ ಸುನೀಲಕುಮಾರ ಈದಿನ.ಕಾಮ್ ದೊಂದಿಗೆ ಮಾತನಾಡಿ, ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ಬೇಮಳಖೇಡ-ಕರಕನಳ್ಳಿ ನಡುವಿನೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರ ವಿಳಂಬದಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆಗಾಲದ ಕಾರಣ ಸೇತುವೆ ಕೆಲಸ ನಡೆಯಲಿಲ್ಲ. ಬರುವ ಫೆಬ್ರವರಿ ತನಕ ಕಾಮಗಾರಿ ಪೂರ್ಣಗೊಳ್ಳುವುದು ಎಂದು ಹೇಳಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.