ವಿಜಯಪುರ ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಗೋದಾಮು ದುರಂತದಲ್ಲಿ ಬದುಕುಳಿದಿರುವ ಬಿಹಾರ ಕಾರ್ಮಿಕರು, ನಮಗೆ ಬಾಕಿ ಕೂಲಿ ಕೊಟ್ಟರೆ ನಮ್ಮೂರಿಗೆ ಮರಳುತ್ತೇವೆ ಎಂದು ಕೇಳಿಕೊಳ್ಳುತ್ತಿದ್ದಾರೆ.
ಕಣ್ಣೆದುರೇ ತಮ್ಮವರನ್ನು ಕಳೆದುಕೊಂಡು, ನಿದ್ದೆ ಬರುತ್ತಿಲ್ಲ, ಊಟ ಸೇರುತ್ತಿಲ್ಲ, ಮಾನಸಿಕವಾಗಿ ಕುಗ್ಗಿದ್ದೇವೆ ಎನ್ನುತ್ತಿದ್ದು, ನಿರಾಸೆ, ಬೇಸರ ಹಾಗೂ ಆತಂಕದಲ್ಲಿರುವ ಕಾರ್ಮಿಕರು ‘ನಮ್ಮೂರಿಗೆ ಸುರಕ್ಷಿತವಾಗಿ ತಲುಪಿದರೆ ಸಾಕು’ ಎಂಬ ಸ್ಥಿತಿಯಲ್ಲಿದ್ದಾರೆ.
ದುರಂತದ ವಿಷಯ ಗೊತ್ತಾದ ಕೂಡಲೇ ಊರಿನಿಂದ ಪತ್ನಿ, ಮಕ್ಕಳು, ಬಂಧುಗಳು ಕರೆ ಮಾಡಿ, ಊರಿಗೆ ಮರಳಲು ಕೋರುತ್ತಿದ್ದಾರೆ. ಬಂದು ಬಿಡಿ, ಇಲ್ಲಿಯೇ ಏನಾದರೂ ಮಾಡಿ ಬದುಕೋಣ ಎಂದು ಗೋಗರೆಯುತ್ತಿದ್ದಾರೆ. ತಕ್ಷಣವೇ ಊರಿಗೆ ಹೋಗಲು ಕೈಯಲ್ಲಿ ಹಣವಿಲ್ಲ. ರೈಲು ಟಿಕೆಟ್ ತೆಗೆಸಲು ನಮ್ಮಲ್ಲಿ ಹಣವಿಲ್ಲ, ಮಾಲೀಕರು ನಮ್ಮ ಬಾಕಿ ಕೂಲಿ ಕೊಟ್ಟರೆ ಈಗಲೇ ಹೊರಡುತ್ತೇವೆ. ಮರಳಿ ಬರುತ್ತೇವೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಮುಖಿಯಾ ಹೆಸರುಳ್ಳವರು ಬಿಹಾರದಲ್ಲಿ ಮೀನುಗಾರಿಕೆ ಕೆಲಸ ಮಾಡುವವರು. ನಮ್ಮ ಕುಟುಂಬ ಮೊದಲಿನಿಂದಲೂ ಮೀನುಗಾರಿಕೆ ಮಾಡುತ್ತಿದೆ. ಆದರೆ, ಈಗ ಅಲ್ಲಿ ಮೀನುಗಾರಿಕೆ ಲಾಭದಾಯಕವಾಗಿಲ್ಲ. ಕೂಲಿ ಸಹ ಗಿಟ್ಟುತ್ತಿಲ್ಲ. ಇಲ್ಲಿಯಾದರೂ ನಿಶ್ಚಿತ ಕೂಲಿ ಸಿಗುವುದೆಂದು ಬಂದೆವು. ಆದರೆ, ನಮ್ಮ ಆಪ್ತರು ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ಬರುವುದೆಂದು ನಿರೀಕ್ಷಿಸಿರಲಿಲ್ಲ ಎಂದು ಕಾರ್ಮಿಕ ಮಂಗಲ್ ಮುಖಿಯಾ ತಮ್ಮ ದುಃಖ ಹೇಳಿಕೊಳ್ಳುತ್ತಾರೆ.
ಸಾವಿಗೀಡಾದವರಿಗೆ ಮಾಲೀಕ ಇನ್ನೂ ಪರಿಹಾರ ಕೊಟ್ಟಿಲ್ಲ. ಸರ್ಕಾರವೂ ಪರಿಹಾರ ಕೊಟ್ಟಿಲ್ಲ, ಶವಗಳ ಅಂತ್ಯಕ್ರಿಯೆಗೂ ಹಣ ಸಿಕ್ಕಿಲ್ಲ. ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ ಎಂದರು.
ಗೋದಾಮು ದುರಂತದಲ್ಲಿ ಸಾವಿಗೀಡಾದ ಏಳು ಜನ ಕಾರ್ಮಿಕರ ಶವಗಳನ್ನು ಹೈದರಾಬಾದ್‌ನಿಂದ ಪಟ್ನಾಕ್ಕೆ ವಿಮಾನದ ಮೂಲಕ ಸಾಗಿಸಲಾಗಿದೆ. ಬುಧವಾರ(ಡಿ.06) ಸಂಜೆ ಆಯಾ ಕಾರ್ಮಿಕರ ಊರುಗಳಿಗೆ ಶವಗಳನ್ನು ತಲುಪಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪರಿಹಾರದ ಮೊತ್ತವನ್ನು ಮೃತರ ಕುಟುಂಬದವರಿಗೆ ತಲುಪಿಸುವ ಸಂಬಂಧ ಬಿಹಾರ ರಾಜ್ಯದ ಆಯಾ ಜಿಲ್ಲಾಧಿಕಾರಿಗಳಿಂದ ಅಗತ್ಯ ಮಾಹಿತಿ ದಾಖಲೆ ಪತ್ರಗಳನ್ನು ಪಡೆದು ಬ್ಯಾಂಕ್ ಖಾತೆಗೆ ಶೀಘ್ರದಲ್ಲೇ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಇಲ್ಲಿರುವ ಕೂಲಿಕಾರ್ಮಿಕರು ತಮ್ಮ ಊರಿಗೆ ತೆರಳುವ ಸಂಬಂಧ ಸಹಕಾರ ಕೇಳಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಲ್ಲ. ನೆರವು ನೀಡಲು ಜಿಲ್ಲಾಡಳಿತ ಸಿದ್ಧ. ಗೋದಾಮು ಮಾಲೀಕರಿಂದ ಕಾರ್ಮಿಕರಿಗೆ ಬಾಕಿ ಕೂಲಿ ಕೊಡಿಸಲಾಗುವುದು ಎಂದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ದುರಂತದ ಆರೋಪಿಗಳು ವಕೀಲರ ಮೂಲಕ ಕೋರ್ಟ್‌ಗೆ ಶರಣಾಗಲು ಯತ್ನ ನಡೆಸಿದ್ದಾರೆ ಎಂಬುದು ಗೊತ್ತಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.