ಈ ಬಾರಿಯ ಮುಂಗಾರು ಕೈಕೊಟ್ಟ ಹಿನ್ನೆಲೆ ರಾಜ್ಯದ ರೈತರು ಪರದಾಡುವಂತಾಗಿದ್ದು, ದನ-ಕರುಗಳಿಗೆ ಮೇಲು ಸಂಗ್ರಹಿಸಲು ಹೆಣಗಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ಭಾರೀ ಮೇವಿನ ಕೊರತೆಯಾಗಿದ್ದು ದುಂಡಶಿ ಹೋಬಳಿ ಸೇರಿದಂತೆ, ರೈತರು ಮೇವು ಸಂಗ್ರಹಿಸಲು ನಿತ್ಯ ಊರೂರು ತಿರುಗುವಂತಾಗಿದೆ.
ಮೇವಿನ ಕೊರತೆ ತೀವ್ರವಾಗುವುದಕ್ಕೂ ಮುಂಚೆಯೇ ಎಚ್ಚೆತ್ತುಕೊಂಡು, ಅಗತ್ಯ ಪ್ರಮಾಣದ ಮೇವು ಬೆಳೆಯುವುದಕ್ಕೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ರೈತರಿಗೆ ಮೆಕ್ಕೆಜೋಳ, ಅಲಸಂದೆ, ಬಿಳಿಜೋಳ ಹಾಗೂ ಇತರ ಮೇವಿನ ಬೀಜಗಳನ್ನೊಳಗೊಂಡ ಮೇವಿನ ಕಿಟ್ ವಿತರಣೆ ಮಾಡಲು ಮುಂದಾಗಬೇಕಾಗಿದೆ ಎನ್ನುತ್ತಿದ್ದಾರೆ ಈ ಭಾಗದ ರೈತರು.
ಸಮರ್ಪಕ ಮಳೆಯಾಗದೆ ಭತ್ತದ ಬೆಳೆಯು ಬೆಳೆಯದೇ ಮೇವು ಸಾಲದಾಗಿದೆ. ಇದರಿಂದಾಗಿ, ಮುಂದೆ ಮೇವು ಕೊರತೆ ಉಲ್ಭಣಿಸುವ ಆತಂಕ ರೈತರನ್ನು ಕಾಡುತ್ತಿದೆ. ಜಾನುವಾರುಗಳ ಮೇವಿನ ವಿಷಯದಲ್ಲೂ ಸರ್ಕಾರದ ನಿರ್ಲಕ್ಷ್ಯ ಕುರಿತು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರ ಮೇವು ಪೂರೈಕೆ ವಿಷಯದಲ್ಲಿ ಮೀನಮೇಷ ಎಣಿಸಬಾರದು. ಜಾನುವಾರುಗಳು ನಮ್ಮ ರೈತರ ಜೀವನಾಡಿಗಳು. ಹಾಲು ಉತ್ಪಾದನೆ ಜೊತೆಗೆ, ಕೃಷಿ ಚಟುವಟಿಕೆಗಳಿಗೆ ರೈತರು ಜಾನುವಾರುಗಳನ್ನೇ ನೆಚ್ಚಿಕೊಂಡಿದ್ದಾರೆ. ಬರದಿಂದ ಬೆಳೆ ನಷ್ಟದಲ್ಲಿರುವ ರೈತರಿಗೆ ಜಾನುವಾರುಗಳಿಗೆ ಅಗತ್ಯ ಮೇವು ಕೊಡಲಾಗದ ಸ್ಥಿತಿ ಎದುರಾಗಿದೆ. ಸರ್ಕಾರ ಅಂತಹವರಿಗೆ ಅಗತ್ಯ ಪ್ರಮಾಣದ ಮೇವು ಪೂರೈಕೆ ಮಾಡಬೇಕು ಎಂದು ರೈತ ಮುಖಂಡ ಹಸಿರು ಸೇನೆ ವರುಣಗೌಡ ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನೀರಾವರಿ ಹೊಂದಿರುವ ರೈತರು ತಮ್ಮ ಹೊಲದಲ್ಲಿ ಹಸಿ ಮೇವನ್ನು ಬೆಳೆಯಲು ಹೋಬಳಿ ಮಟ್ಟದ ಪಶು ಆಸ್ಪತ್ರೆ ಸಂಪರ್ಕಿಸಿ ಬೀಜ ಪಡೆಯಬಹುದು.
ಶಿಗ್ಗಾಂವಿ ತಾಲೂಕಿನ ಹೊಸೂರು ಎತ್ತಿನಹಳ್ಳಿ ಗ್ರಾಮದ ರೈತರು ಭತ್ತ ಬಂದಿಲ್ಲ ಎಂದು ಹುಲ್ಲನ್ನು ಬೇರೆ ತಾಲೂಕು ಜಿಲ್ಲೆಗೆ ಕಳುಹಿಸುತ್ತಿದ್ದು, ಹಿಂಗಾರು ಬೆಳೆಯು ಸರಿಯಾಗಿ ಬರದಿದ್ದರೆ ತಾಲೂಕಿಗೆ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಮೇವು ಕೊರತೆಯಾಗುವ ಸಂಭವ ಇದೆ ಎಂದು ಸಹಾಯಕ ಪಶು ನಿರ್ದೇಶಕರು ಡಾ.ರಾಜೇಂದ್ರ ಅರಳೇಶ್ವರ ಮಾಹಿತಿ ನೀಡಿದ್ದಾರೆ.