ಕೈಗಾರಿಕಾ ಪ್ರದೇಶದಲ್ಲಿ ಇರುವ ರಾಜಗುರು ಮೆಕ್ಕೆಜೋಳ ಆಹಾರ ಸಂಸ್ಕರಣ ಘಟಕದ ಅವಘಡದಲ್ಲಿ ಬಲಿಯಾದ 7 ಮಂದಿ ಕಾರ್ಮಿಕರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಹಾಗೂ ಗಾಯಾಳುಗಳಿಗೆ ಉತ್ತಮ ಮತ್ತು ಉಚಿತ ಚಿಕಿತ್ಸೆಗೆ ಒತ್ತಾಯಿಸಿ ವಿಜಯಪುರ ಜಿಲ್ಲೆಯ ಎಐಯುಟಿಯುಸಿ ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ ನಡೆಸಿದರು.
ಆಲ್ ಇಂಡಿಯಾ ಯುನೈಟೈಡ್ ಟ್ರೆಡ್ ಯುನಿಯನ್ ಸೆಂಟರ್(ಎಐಯುಟಿಯುಸಿ) ವಿಜಯಪುರ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಎಚ್ ಟಿ ಮಾತನಾಡಿ, “ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿ ಇರುವ ರಾಜಗುರು ಆಹಾರ ಸಂಸ್ಕರಣ ಘಟಕದಲ್ಲಿ ಕಳೆದ ಫೆಬ್ರವರಿ 4ರ ಸಂಜೆ ನಡೆದ ಅವಘಡದಲ್ಲಿ ಕಾರ್ಮಿಕರು ಬಲಿಯಾಗಿದ್ದರು. ಅಲ್ಲದೆ ಜೀವ ಕಳೆದುಕೊಂಡ ಕಾರ್ಮಿಕರ ಕುಟುಂಬಕ್ಕೆ ಕಾರ್ಮಿಕ ಕಾಯ್ದೆಗಳ ಪ್ರಕಾರ, ಮಾನವೀಯ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿತ ಅತ್ಯುತ್ತಮ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
“ಘಟನೆಯಲ್ಲಿ ಇನ್ನುಳಿದ ಗಾಯಾಳು ಕಾರ್ಮಿಕರಿಗೂ ಉಚಿತ ಮತ್ತು ಸೂಕ್ತ ವೈದೈಕೀಯ ಚಿಕಿತ್ಸೆ ನೀಡಬೇಕು. ಅವರು ಅರೆ ಅಂಗವೈಕಲ್ಯ ಮತು ಶಾಶ್ವತ ಅಂಗವೈಕಲ್ಯಕ್ಕೆ ಅನುಗುಣವಾಗಿ ಸೂಕ್ತ ಪರಿಹಾರ ನೀಡಬೇಕು. ಈ ಕುರಿತು ಜಿಲ್ಲೆಯ ಕಾರ್ಮಿಕ ಅಧಿಕಾರಿಗಳು, ಪಿಎಫ್ ಅಧಿಕಾರಿಗಳು, ಇಎಸ್‌ಐ ಅಧಿಕಾರಿಗಳ ಮೂಲಕ ಸೂಕ್ತ ಕ್ರಮಕೈಗೊಳ್ಳಬೇಕು” ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
“ದುರ್ಘಟನೆಗೆ ಕಾರಣವಾದ ಕುರಿತು ಸಮಗ್ರ ತನಿಖೆ ನಡೆಸಿ ಕೈಗಾರಿಕೆ ಕಾರ್ಯ ಮುಂದುವರೆಸುವುದರ ಬಗ್ಗೆ ಸೂಕ್ತ ತಿರ್ಮಾನ ಮಾಡಬೇಕು. ಉತ್ತಮ ಗುಣಮಟ್ಟದ ಕೈಗಾರಿಕೆಗೆ ಮಾತ್ರ ಕೆಲಸ ಮಾಡಲು ಅನುಮತಿ ನೀಡಬೇಕು. ಕಾರ್ಯನಿರ್ವವಹಿಸಿದ ಕಾರ್ಮಿಕರಿಗೆ ಕನಿಷ್ಠ ವೇತನ, ಬಾಕಿ ಇರುವ ಪಿಎಫ್, ಇಎಸ್‌ಐಗಳನ್ನು ಅವರಿಗೆ ಕೂಡಲೇ ತಲುಪಿಸಬೇಕು” ಎಂದು ಆಗ್ರಹಿಸಿದರು.
“ಮರಣ ಹೊಂದಿದ ಕಾರ್ಮಿಕರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಒದಗಿಸಬೇಕು. ಗಾಯಾಳುಗಳಾದ ಕಾರ್ಮಿಕರಿಗೆ ಉತ್ತಮವಾದ ಉಚಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಬೇಕು. ಗಾಯಾಳುಗಳಾದ ಕಾರ್ಮಿಕರು ಪೂರ್ಣ ಗುಣಮುಖರಾಗಿ ಮರಳಿ ಉದ್ಯೋಗಕ್ಕೆ ತಿರುಗುವವರೆಗೂ ವೇತನ ನೀಡಬೇಕು. ಕೈಗಾರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಕಾರ್ಮಿಕರಿಗೆ ಪಿಎಫ್ ಮತ್ತು ಇಎಸ್‌ಐ ಸೌಕರ್ಯಗಳನ್ನು ಕಡ್ಡಾಯಗೂಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯಲ್ಲಿ ಡಯಾಲಿಸಿಸ್ ಕೇಂದ್ರ ಹೆಚ್ಚಿಸಲು ಶಾಸಕ ಡಾ ಶೈಲೇಂದ್ರ ಬೆಲ್ದಾಳೆ ಒತ್ತಾಯ
“ಕೈಗಾರಿಕೆಯ ಕಟ್ಟದ ನಿರ್ಮಾಣದ ಗುಣಮಟ್ಟವನ್ನು ಕಾಪಾಡಬೇಕು. ಎಲ್ಲ ಕೈಗಾರಿಕೆಗಳಲ್ಲಿ ಸುರಕ್ಷತಾ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಬೇಕು, ಎಲ್ಲ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಶಾಸನ ಬದ್ದ ಸೌಕರ್ಯಗಳಾದ ಪಿಎಫ್ ಮತ್ತು ಇಎಸ್‌ಐ ಕುರಿತು ಖಾತ್ರಿ ಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಕೈಗಾರಿಕಾ ಕಾರ್ಮಿಕ ಕಾಯಿದೆಗಳನ್ನು ಉಲ್ಲಂಘನೆ ಮಾಡಿದ ಮಾಲೀಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ವಲಸೆ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ನೀತಿಗಳನ್ನು, ಸೌಲಭ್ಯಗಳನ್ನು ರೂಪಿಸಬೇಕು” ಎಂದು ಆಗ್ರಹಿಸಿದರು.