ಬೆಳಗಾವಿ ಜಿಲ್ಲೆಯ ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಮರಣಹೂಳ ಗ್ರಾಮದಲ್ಲಿ 1400 ಎಕರೆ ಇನಾಂ ಜಮೀನಿನ ಭೂಹಗರಣದ ವಿರುದ್ಧ ಅಲ್ಲಿನ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮರಣಹೂಳ ಗ್ರಾಮದಿಂದ ಬೆಳಗಾವಿಯ ಸುವರ್ಣಸೌಧಕ್ಕೆ ಮರಣಹೂಳ ಗ್ರಾಮಸ್ಥರ ಜೊತೆಗೂಡಿ ಕೆಆರ್‌ಎಸ್ ಪಕ್ಷವು ಇದೇ ಡಿಸೆಂಬರ್ 6ರಿಂದ ಪಾದಯಾತ್ರೆ ಆರಂಭಿಸಿದೆ.
ಹಗರಣದ ವಿವರ
“ಇನಾಂ ಜಮೀನು ಕಾಯ್ದೆ ಪ್ರಕಾರ ಸದರಿ ಇನಾಂ ಭೂಮಿಯನ್ನು ಖರೀದಿ ಅಥವಾ ಮಾರಾಟ ಮಾಡುವುದಕ್ಕೆ ಬರುವುದಿಲ್ಲ. ಆದುದರಿಂದ 19 ಜನ ಬೇರೆ ಜಿಲ್ಲೆಯವರು ವಂಚಕರು, ಬೃಹತ್ ಉದ್ಯಮಿಗಳು, ವೈದ್ಯರು, ಶ್ರೀಮಂತರು, ಸದರಿ ಗ್ರಾಮದಲ್ಲಿ ಎಂದೆಂದಿಗೂ ಬಂದು ವಾಸ ಮಾಡಿರುವುದಿಲ್ಲ, ಸದರಿ ಭೂಮಿಯನ್ನು ಎಂದೆಂದಿಗೂ ಉಳುಮೆ ಮಾಡಿರುವುದಿಲ್ಲ. ಆದರೆ ಉಳುಮೆ ಮಾಡುತ್ತಿದ್ದೇವೆ ಎಂಬುದಾಗಿ ಸುಳ್ಳು ಹೇಳಿ, ಕಂದಾಯ ಅಧಿಕಾರಿಗಳು ಹಾಗೂ 19 ಜನ ವಂಚಕರಲ್ಲಿ ಕೆಲವರು ಸುಳ್ಳು ದಾಖಲಾತಿ ಸೃಷ್ಟಿ ಮಾಡಿ, ಮೂಲ ಕಾಗದ ಪತ್ರಗಳನ್ನು ಹರಿದು ಹಾಕಿ, ಇನಾಮದಾರರ ನಕಲಿ ಸಹಿಯನ್ನು ತಯಾರಿಸಿ, ಭೂ ಸುಧಾರಣಾ ಕಾಯ್ದೆಯ ಕಲಂ 63,79ಎ,79ಬಿ ಉಲ್ಲಂಘನೆ ಮಾಡಿ ಜಮೀನು ಮಂಜೂರು ಮಾಡಿಕೊಂಡಿರುತ್ತಾರೆ” ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘ ಆಗ್ರಹ
“ಮರಣಹೂಳ ಗ್ರಾಮದ 1400 ಇನಾಂ ಜಮೀನಿನ ಕುರಿತು ವಿಶೇಷ ತನಿಖಾ ತಂಡ ರಚನೆ ಮಾಡಿ ಅಥವಾ ನ್ಯಾಯಾಂಗ ತನಿಖೆ ಮಾಡಿ , ಸದರಿ 1,400 ಎಕರೆ ಸಂಪೂರ್ಣ ಇನಾಂ ಭೂಮಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡು ರೈತರಿಗೆ ನೀಡಬೇಕು” ಎಂದು ಕೆಆರ್‌ಎಸ್ ಪಕ್ಷದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದು ಕಣಬುರಗಿ ಸರ್ಕಾರಕ್ಕೆ ಒತ್ತಾಯಿಸಿದರು.