ದಾವಣಗೆರೆ ಜಿಲ್ಲೆ ಜಗಳೂರು ನಗರದ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆ ಉಪಹಾರ ಸೇವನೆಯೊಂದಿಗೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮ ಹಾಗೂ ಮೌಢ್ಯ ಪರಿವರ್ತನಾ ದಿನ ಆಚರಣೆ ಮಾಡಿದ್ದಾರೆ.
ಈ ವೇಳೆ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ವಕೀಲ ಮರೇನಹಳ್ಳಿ ಬಸವರಾಜ್ ಮಾತನಾಡಿ, ಕಳೆದ ದಶಕದಿಂದ ಮಾನವಬಂಧುತ್ವ ವೇದಿಕೆಯ ರೂವಾರಿಗಳು ಹಾಗೂ ಮಾನ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ, ಪ್ರತಿ ಡಿಸೆಂಬರ್ 6ರಂದು ಅಂಬೇಡ್ಕರ್ ಪರಿನಿರ್ವಾಣದ ಅಂಗವಾಗಿ ಬೆಳಗಾವಿಯ ಸದಾಶಿವನಗರದ ವೀರಶೈವ ರುದ್ರಭೂಮಿಯಲ್ಲಿ ಎರಡು ದಿನಗಳಕಾಲ ವೈಚಾರಿಕ, ವೈಜ್ಞಾನಿಕತೆ ಪ್ರಚಾರ, ಮೌಡ್ಯ ಮುಕ್ತಕ್ಕಾಗಿ ಆಯೋಜಿಸಿತ್ತಿದ್ದ ಸ್ಮಶಾನವಾಸ್ತವ್ಯ ಕಾರ್ಯಕ್ರಮದಲ್ಲಿ ತಾಲೂಕಿನಿಂದ ಭಾಗವಹಿಸಲಾಗುತ್ತಿತ್ತು.
ಪ್ರಸಕ್ತ ವರ್ಷ ಚಳಿಗಾಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ತಾಲೂಕು ಜಿಲ್ಲಾ ಮಟ್ಟದಲ್ಲಿ ಸ್ಮಶಾನದಲ್ಲಿ ಉಪಹಾರ ಸೇವಿಸಿ ಮೌಢ್ಯತೆ ಪರಿವರ್ತನೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮುಖಂಡ ಕಾನನಕಟ್ಟೆ ಪ್ರಭು ಮಾತನಾಡಿ, ಸಂವಿಧಾನದ ಆಶಯಗಳು ಈಡೇರುವವರೆಗೂ ಸಮಾಜದಲ್ಲಿ ಸ್ವಾಸ್ಥ್ಯತೆ ಕಾಪಾಡಲು ಅಸಾಧ್ಯ. ತಳ ಸಮುದಾಯಗಳು ಶಿಕ್ಷಣ ಪಡೆದು ದೇವರುಗಳ ಹೆಸರಿನಲ್ಲಿ ನಡೆಸುವ ಮೂಢನಂಬಿಕೆ, ಕಂದಾಚಾರಗಳಿಂದ ಮುಕ್ತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಅಂಬೇಡ್ಕರ್ ಅವರ ಕನಸಿನಂತೆ ಮಹಿಳೆಯರು ದೇವಸ್ಥಾನದ ಮೊರೆಹೋಗದೆ ಗ್ರಂಥಾಲಯಗಳಲ್ಲಿ ಸಾಲುನಿಂತು ಪುಸ್ತಕಗಳನ್ನು ಅಭ್ಯಾಸ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಕೀಲ ಸಣ್ಣ ಓಬಯ್ಯ ಮಾತನಾಡಿ, ದೇಶಕ್ಕೆ ಸಂವಿಧಾನವೇ ಪವಿತ್ರಗ್ರಂಥವಾಗಿದೆ. ಮನುವಾದಿಗಳಿಂದ ಸಂವಿಧಾನ ತಿರುಚುವ ಹುನ್ನಾರ ನಡೆಯತ್ತಿದೆ. ಸಂವಿಧಾನ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅದಕ್ಕೆ ದಕ್ಕೆ ಉಂಟಾದರೆ ಹೊರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಆಚರಣೆಯಲ್ಲಿ ಪ್ರಾಂಶುಪಾಲ ಎ.ಡಿ.ನಾಗಲಿಂಗಪ್ಪ, ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಧನ್ಯಕುಮಾರ್, ಎಚ್.ಎಂ. ಹೊಳೆ, ಡಿಎಸ್‌ಎಸ್ ಸಂಚಾಲಕ ಸತೀಶ್ ಮಲೆಮಾಚಿಕೆರೆ, ಪ್ರಗತಿಪರ ಹೊರಾಟಗಾರ ಮಾದಿಹಳ್ಳಿ ಮಂಜುನಾಥ್, ಸಿದ್ದಮ್ಮನಹಳ್ಳಿ ಬಸವರಾಜ್, ಮರೇನಹಳ್ಳಿ ಕುಮಾರ್, ಗುತ್ತಿದುರ್ಗ ರುದ್ರೇಶ್, ಸ್ವಾಮಿ, ಬಸಯ್ಯ, ನಾಗೇಶ್ ದೊಡ್ಡಬೊಮ್ಮನಹಳ್ಳಿ ಸೇರಿದಂತೆ ಇತರರು ಇದ್ದರು.