ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಆರ್ ಡಿ ಪಾಟೀಲ್ ವಿರುದ್ಧದ ಎಫ್‍ಐಆರ್ ಗಳಿಗೆ ತಡೆಯಾಜ್ಞೆ ವಿಧಿಸಿ ಹೈಕೋರ್ಟ್ 2023ರ ಎ.17ರಂದು ಮಾಡಿದ್ದ ಮಧ್ಯಂತರ ಆದೇಶವು ತೆರವಾಗಿದೆ.
ಈ ಮೂಲಕ ಆರ್ ಡಿ ಪಾಟೀಲ್ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಕಲಬುರಗಿ ಹೈಕೋರ್ಟ್ ಪೀಠ ಕಿಂಗ್‌ಪಿನ್ ಆರ್ ಡಿ ಪಾಟೀಲ್ ವಿರುದ್ಧ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ.
ರಾಜ್ಯದ ಹಲವೆಡೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳನ್ನ ವಿಲೀನಗೊಳಿಸಿ ಒಂದೇ ಕಡೆ ವಿಚಾರಣೆ ನಡೆಸಲು ಆರ್ ಡಿ ಪಾಟೀಲ್ ಮನವಿ ಮಾಡಿದ್ದರು. ಅಲ್ಲಿಯವರೆಗೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ಪಡೆದಿದ್ದರು.
ಕಲಬುರಗಿ, ಬೆಂಗಳೂರು, ಧಾರವಾಡ ಮತ್ತು ತುಮಕೂರಿನ ವಿವಿಧ ಠಾಣೆಗಳಲ್ಲಿ ವಿವಿಧ ಆರೋಪಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ದಾಖಲಾಗಿರುವ 11 ಎಫ್‍ಐಆರ್ ಹಾಗೂ ಆರೋಪ ಪಟ್ಟಿ ಒಟ್ಟಾಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಪ್ರಕಟಿಸಿದೆ.
ಇತ್ತೀಚೆಗೆ ಕೆಇಎ ಅಕ್ರಮದಲ್ಲೂ ಈ ವ್ಯಕ್ತಿಯೇ ಕಿಂಗ್ ಪಿನ್ ಆಗಿದ್ದು, ಸಿಐಡಿ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲ ಎಫ್‌ಐಆರ್‌ಗಳಿಗೆ ದಾಖಲಾದ ಪ್ರಕರಣಗಳನ್ನ ಒಂದೇ ಕಡೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಆರ್ ಡಿ ಪಾಟೀಲ್ ಮೇಲ್ಮನವಿಗೆ ಹೈಕೋರ್ಟ್ ಪೀಠ ಪ್ರತಿಕ್ರಿಯಿಸಿದೆ.
ಕಲಬುರಗಿ ನಗರದ ಅಶೋಕ್ ನಗರ ಠಾಣೆಯಲ್ಲಿ ಐದು, ಸ್ಟೇಷನ್ ಬಜಾರ್ ಠಾಣೆಯಲ್ಲಿ ಎರಡು, ಚೌಕ್ ಠಾಣೆಯಲ್ಲಿ ಒಂದು ಹಾಗೂ ಧಾರವಾಡದ ಸಬ್ ಅರ್ಬನ್, ತುಮಕೂರಿನ ಕ್ಯಾತಸಂದ್ರ ಹಾಗೂ ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಗಳಲ್ಲಿ ದಾಖಲಾಗಿರುವ ತಲಾ ಒಂದೊಂದು ಎಫ್‍ಐಆರ್ ಮತ್ತು ಆರೋಪ ಪಟ್ಟಿಯನ್ನು ಒಟ್ಟಾಗಿಸಬೇಕು ಎಂದು ಆರ್.ಡಿ ಪಾಟೀಲ್ ಮನವಿ ಮಾಡಿದ್ದರು.