ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಅಕ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತಿಹೆಚ್ಚು ಹಣ ದುರ್ಬಳಕೆ ಆರೋಪದ ಮೇಲೆ ಆರು ಗ್ರಾಮ ಪಂಚಾಯ್ತಿಯ ನಾಲ್ವರು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕರಾಂ ಆದೇಶಿಸಿದ್ದಾರೆ.
ಕ್ಯಾದಿಗೇರಾ ಮತ್ತು ಕೊತ್ತದೊಡ್ಡಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸಿ.ಬಿ.ಪಾಟೀಲ್, ಗಾಣಧಾಳ ಮತ್ತು ಸೋಮನಮರಡಿ ಗ್ರಾಮ ಪಂಚಾಯ್ತಿಯ ಮಲ್ಲಪ್ಪ, ಕೆ.ಇರಬಗೇರಾ, ದೊಂಡಬಳಿ, ಜಾಲಹಳ್ಳಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯಾಗಿದ್ದ ಫತ್ತೆಪ್ಪ ರಾಠೋಢ ಮತ್ತು ಶಾವಂತಗೇರಾ ಪಂಚಾಯ್ತಿಯ ಗುರುಸ್ವಾಮಿ ಇವರನ್ನು ಅಮಾನತುಗೊಳಿಸಲಾಗಿದೆ.
ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯ್ತಿಗಳಲ್ಲಿ ಉದ್ಯೋಗ ಖಾತ್ರಿ ಸಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಆರು ಗ್ರಾಮ ಪಂಚಾಯ್ತಿಗಳಲ್ಲಿ ಅತಿಹೆಚ್ಚು ಖರ್ಚು ತೋರಿಸಲಾಗಿದ್ದು ದಾಖಲೆ ನೀಡದೇ ಇರುವುದು, ಕಳಪೆ ಕಾಮಗಾರಿ ನಿರ್ವಹಿಸಿರುವುದು ಸೇರಿದಂತೆ ಅಕ್ರಮ ಹಣ ವರ್ಗಾವಣೆಗೊಂಡಿರುವ ಆರೋಪಗಳನ್ನು ಪಿಡಿಓಗಳು ಎದುರಿಸುತ್ತಿದ್ದಾರೆ.
2020-21ನೇ ಸಾಲಿನಲ್ಲಿ ನಡೆದಿರುವ ಅಕ್ರಮದ ಕುರಿತು ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಿ ನೀಡಲಾಗಿರುವ ಮಧ್ಯಂತರ ವರದಿ ಆಧಾರಿಸಿ ನಾಲ್ವರನ್ನು ಮೊದಲ ಹಂತದಲ್ಲಿ ಅಮಾನತುಗೊಳಿಸಿ ಆದೇಶಿಸಲಾಗಿದೆ.