ವಯೋಸಹಜ ಅನಾರೋಗ್ಯದಿಂದ ಅಗಲಿದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಂತ್ಯಸಂಸ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು (ಡಿ.9) ಸಂಜೆ ಬೆಂಗಳೂರಿನ ನೆಲಮಂಗಲದಲ್ಲಿ ನೆರವೇರಿಸಲಾಯಿತು.
85 ವರ್ಷದ ಲೀಲಾವತಿ ಅವರು ನಿನ್ನೆ ನಿಧನರಾಗಿದ್ದರು. ನೆಲಮಂಗಲದ ಸೋಲದೇವನಹಳ್ಳಿಯ ತೋಟದಲ್ಲಿ ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಪುತ್ರ ವಿನೋದ್ ರಾಜ್ ಅವರು ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಪೊಲೀಸ್ ವಾದ್ಯವೃಂದದ ಮೂಲಕ ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು. ಸರ್ಕಾರದ ಪರವಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆಹೆಚ್ ಮುನಿಯಪ್ಪ ಲೀಲಮ್ಮಗೆ ಅಂತಿಮ ಗೌರವ ಸಲ್ಲಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ ಶಿವಶಂಕರ್ ಎನ್ ಈ ಸಂದರ್ಭದಲ್ಲಿ ಹಾಜರಿದ್ದರು.
ಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದೆ.
ಲೀಲಾವತಿ ಅವರ ನಿಧನದಿಂದ ನನಗೆ ಅತೀವ ನೋವಾಗಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. #KannadaFilmActor #Leelavathi #RIP pic.twitter.com/gzqbu50iLe
— KH Muniyappa (@KHMuniyappaklr) December 9, 2023
ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕಲಾವಿದರೂ, ರಾಜಕಾರಣಿಗಳು ಹಾಗೂ ಸಾವಿರಾರೂ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
“ನಮ್ಮ ಕಾಲದಲ್ಲಿ ರಾಜ್ ಕುಮಾರ್-ಲೀಲಾವತಿ ಎಂದರೆ ಬಹಳ ಜನಪ್ರಿಯ ಜೋಡಿ. ಅವರಿಬ್ಬರೂ ಅಭಿನಯಿಸಿದ್ದ ಎಲ್ಲಾ ಚಿತ್ರಗಳನ್ನು ನಾನು ನೋಡಿದ್ದೇನೆ. ಹೆಸರಿಗೆ ತಕ್ಕಂತೆ ಲೀಲಾವತಿಯವರು ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ಅಂತಹ ಅಭಿನಯ ಎಲ್ಲರಿಗೂ ಬರುವುದಿಲ್ಲ, ಅದು ರಾಜ್ ಕುಮಾರ್ ಗೆ ಸಿದ್ಧಿಸಿತ್ತು. ಲೀಲಾವತಿಯವರಿಗೂ ಕಲೆ ಒಲಿದಿತ್ತು” ಎಂದು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದರು.