ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಮನಾಬಾದ್ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಔರಾದ ಗ್ರಾಮದ ಮಲ್ಲಯ್ಯಾ ಈರಯ್ಯಾ ಸ್ವಾಮಿ (33) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಗಾಯಗೊಂಡ ಬೈಕ್ ಚಾಲಕ ರಮೇಶ ದತ್ತು ಎಂಬುವರನ್ನು ಮಹಾಗಾಂವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದೇ ಗ್ರಾಮದವರಾದ ಇಬ್ಬರೂ ಹುಮನಾಬಾದ್ ಪಟ್ಟಣದಲ್ಲಿರುವ ಸ್ನೇಹಿತರನ್ನು ಭೇಟಿಯಾಗಿ ಸ್ವಗ್ರಾಮಕ್ಕೆ ತೆರಳುವ ವೇಳೆ ಘಟನೆ ಜರುಗಿದೆ. ಈ ಕುರಿತು ಹುಮನಾಬಾದ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.