ಸರ್ಕಾರಿ ಶಾಲೆಗಳ ಸ್ಥಿತಿ ಅತ್ಯಂತ ದಯಾನೀಯ ಪರಿಸ್ಥಿತಿಯಲ್ಲಿದೆ. ಈ ಶಾಲೆಗಳನ್ನು ಉಳಿಸುವುದರೊಂದಿಗೆ, ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ರಾಯಚೂರು ನಗರಸಭೆ ಸದಸ್ಯ ಜಯಣ್ಣ ಹೇಳಿದ್ದಾರೆ.
ರಾಯಚೂರಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾರ್ಯಕರ್ತರ ಸಮಾವೇಶ ಮತ್ತು ವಿಜ್ಞಾನ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಅನೇಕ ಮೌಢ್ಯಗಳ ವಿರುದ್ಧ ಸವಾಲು ಹಾಕಿ ವೇದಿಕೆಯು ಹೋರಾಟ ಮಾಡುತ್ತಿದೆ. ಜನರಲ್ಲಿ ವಿಜ್ಞಾನದ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ” ಎಂದು ಹೇಳಿದರು.
“ಇಂದಿನ ಸರ್ಕಾರ ಶಾಲೆಗಳ ಸ್ಥಿತಿಗತಿಯ ಬಗ್ಗೆ ಚಿಂತನೆ ನಡೆಸುವಂತೆ ಗಮನ ಸೆಳೆಯಲು ಭಾರತ ಜ್ಞಾನ ವಿಜ್ಞಾನ ಸಮಿತಿ ಆಲೋಚಿಸುವ ಅಗತ್ಯವಿದೆ. ಸರ್ಕಾರಿ ಶಾಲೆಗಳು ಬಡ ಮಕ್ಕಳ ವಿದ್ಯಾರ್ಜನೆ ಕೇಂದ್ರಗಳಾಗಿವೆ. ಈ ಶಾಲೆಗಳ ಸಂರಕ್ಷಣೆ ಬಹುಸಂಖ್ಯಾತ ಜನರ ಅಭ್ಯಾಸಕ್ಕೆ ಪೂರಕವಾಗಿವೆ. ಆದರೆ ಸರ್ಕಾರಿ ಶಾಲೆಗಳ ಸ್ಥಿತಿ ಅತ್ಯಂತ ಗಂಭೀರವಾಗುತ್ತಿದೆ. ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಶಾಲೆಗಳಿಗೆ ಹೊಸ ಚೈತನ್ಯ ನೀಡುವ ಮತ್ತು ಸಮಗ್ರ ಅಭಿವೃದ್ಧಿಗೆ ಆಂದೋಲನ ನಡೆಸುವ ಮಹತ್ವದ ನಿರ್ಧಾರಕ್ಕೆ ಸಂಬಂಧಿಸಿದಂತೆ ಚಿಂತನೆ ನಡೆಸಬೇಕಾಗಿದೆ” ಎಂದರು.
“ತರಗತಿಯೇ ಇಲ್ಲದ ಪರಿಸ್ಥಿತಿಯಲ್ಲಿ ವಿಜ್ಞಾನದ ಬೋಧನೆ ಎಲ್ಲಿ ನಡೆಯಲಿದೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುವ ಸಂದಿಗ್ದತೆಯಲ್ಲಿದ್ದೇವೆ. ಈ ಹಿನ್ನೆಲೆಯಲ್ಲಿ ಸಮಿತಿಯು ತನ್ನ ವೈಜ್ಞಾನಿಕ ಚಟುವಟಿಕೆಗಳೊಂದಿಗೆ ಸರ್ಕಾರಿ ಶಾಲೆಗಳ ಉಳಿಸುವ ಆಂದೋಲನಕ್ಕೂ ಬೆನ್ನೆಲುಬಾಗುವ ಅಗತ್ಯವಿದೆ” ಎಂದು ಹೇಳಿದರು.
ವೇದಿಕೆಯ ಭೀಮರೆಡ್ಡಿ ಮಾತನಾಡಿ, “ಹಲವು ವರ್ಷಗಳಿಂದ ವೈವಿಧ್ಯಮಯ ಹೋರಾಟಗಳ ಮೂಲಕ ಜನರ ಮಧ್ಯೆ ಮೌಢ್ಯಗಳ ಅಂಧಕಾರ ತೊಲಗಿಸಿ, ವಿಜ್ಞಾನ ಚಿಂತನೆಗೆ ಚಾಲನೆ ನೀಡುವ ಕೆಲಸವನ್ನು ವೇದಿಕೆ ಮಾಡಿದೆ. ಹೊಸ ಆವಿಷ್ಕಾರದೊಂದಿಗೆ ಜನಜಾಗೃತಿ ಹೋರಾಟಗಳನ್ನು ಮತ್ತಷ್ಟು ತೀವ್ರ ಗೊಳಿಸುವ ಹೊಸ ನಾಯಕತ್ವ ಅಗತ್ಯವಾಗಿದೆ. ಹಿನ್ನೆಲೆಯಲ್ಲಿ ಹೆಚ್ಚಿನ ವೈಜ್ಞಾನಿಕ ಚಿಂತಕರು ಆಧುನಿಕ ಆಲೋಚನೆಯ ವಿಚಾರವಾದಿಗಳು, ಈ ವೇದಿಕೆಯೊಂದಿಗೆ ತಮ್ಮನ್ನು ಗುರುತಿಸಿಕೊಂಡು ಸಮಾಜದಲ್ಲಿ ಮೌಢ್ಯದ ವಿರುದ್ಧ ವಿಜ್ಞಾನ ಚಳುವಳಿಗೆ ಸಶಕ್ತ ಗೊಳಿಸಲು ಮುಂದಾಗಬೇಕಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಎಂ.ರವಿ, ಜಯತೀರ್ಥ ಸೇರಿದಂತೆ ಹಲವರು ಇದ್ದರು.
ವರದಿ : ಹಫೀಜುಲ್ಲ