ಸಂವಿಧಾನದ ಉಳಿವಿಗಾಗಿ ನಾವು ಕಟಿ ಬದ್ದರಾಗಬೇಕು. ಹಾಗೂ ಸಂಘಟಿತರಾಗುವುದು ಅವಶ್ಯವಿದೆ. ಸರ್ಕಾರಗಳು ತಪ್ಪು ಮಾಡಿದಾಗ ದಲಿತಪರ ಸಂಘಟನೆಗಳು ಎಚ್ಚರಿಕೆ ನೀಡುತ್ತಾ ಬಂದಿದ್ದು, ಈಗಲೂ ಆ ಕೆಲಸಗಳು ನಡೆಯುತ್ತಿವೆ ಎಂದು ಡಿಎಸ್ಎಸ್ ಗದಗ ಜಿಲ್ಲಾ ಪ್ರಧಾನ ಸಂಚಾಲಕ ಬಾಲರಾಜ್ ಅರಬರ್ ಹೇಳಿದರು.
ಗದಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಕಾರ್ಯಕರ್ತರು ಹಮ್ಮಿಕೊಂಡಿದ್ದ ʼಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿʼ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
“ಸಂವಿಧಾನ ಬದಲಾಯಿಸುವುದಕ್ಕೆ ನಾವು ಬಂದಿದ್ದೇವೆಂದು ಹೇಳುತ್ತಿರುವವರಿಗೆ ಸಂವಿಧಾನ ರಕ್ಷಣೆಗೆ ಬದ್ದರಾಗಿದ್ದೇವೆಂದು ನಾವೂ ಕೂಡ ಅವರಿಗೆ ಪ್ರತ್ಯುತ್ತರ ಕೊಡಬೇಕಿದೆ. ಹಾಗಾಗಿ ಡಿಎಸ್ಎಸ್ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕರೆಯ ಮೇರೆಗೆ ಗದಗ ಜಿಲ್ಲೆಯಲ್ಲಿ ಇದೇ 27ರಂದು ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಎಲ್ಲ ದಲಿತಪರ ಮುಖಂಡರು, ಸಂಘಟಕರು ಹಾಗೂ ದಲಿತ ಸಮುದಾಯದವರು ಭಾಗವಹಿಸಬೇಕು” ಎಂದು ಕರೆ ನೀಡಿದರು.
ದಲಿತಪರ ಮುಖಂಡ ಶರೀಫ್ ಬಿಳಿಯಲಿ ಮಾತನಾಡಿ, “ಸಂವಿಧಾನ ಒಂದು ಜಾತಿಗೆ ಸಿಮೀತವಾಗಿಲ್ಲ. ಎಲ್ಲ ಸಮುದಾಯಗಳನ್ನು ಒಳಗೊಂಡಿರುವಂತದ್ದು, ಹಾಗಾಗಿ ಈ ಸಮಾವೇಶದಲ್ಲಿ ಎಲ್ಲ ಸಮುದಾಯದ ಮುಖಂಡರೂ ಭಾಗವಹಿಸುವಂತೆ ಮಾಡವುದು ಅವಶ್ಯಕತೆ ಇದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಘನತೆ, ಗೌರವದ ಬದುಕಿಗೆ ಮಾನವ ಹಕ್ಕುಗಳು ಅವಶ್ಯಕ : ಮೌಲಾನಾ ಹಾಮೆದ್ ಖಾನ್
ಈ ಸಭೆಯಲ್ಲಿ ಡಿಎಸ್ಎಸ್ ಜಿಲ್ಲಾ ಉಪ ಪ್ರಧಾನ ಸಂಚಾಲಕ ನಾಗರಾಜ ಗೋಕಾವಿ, ಚಲವಾದಿ ಮಹಾಸಭಾ ಜಿಲ್ಲಾ ಅಧ್ಯಕ್ಷ ಆನಂದ ಸಿಂಗಾಡಿ, ಮುತ್ತು ಬಿಳಿಯಲಿ, ಪರಶು ಕಾಳೆ, ಕೆಂಚಪ್ಪ ಮ್ಯಾಗೇರಿ, ಗಣೇಶ ಹುಬ್ಬಳ್ಳಿ, ಮುತ್ತಣ್ಣ ಚೌಡಣ್ಣವರ ಹಾಗೂ ಇನ್ನೂ ಅನೇಕ ದಲಿತ ಮುಖಂಡರು ಇದ್ದರು.