ಜ್ಯೋತಿಬಾ ಜನ್ಮದಿನ | ಬ್ರಾಹ್ಮಣಶಾಹಿ ವಿರುದ್ಧ ಹೋರಾಟ ನಡೆಸಿದವರು ಮಹಾತ್ಮ ಫುಲೆ

Date:

Advertisements
ಕಾಂಗ್ರೆಸ್ಸಿಗೆ ಮತ್ತು ಮೇಲ್ಜಾತಿಯ ಸುಧಾರಣಾವಾದಿಗಳಿಗೆ ಜಾತಿ ವ್ಯವಸ್ಥೆ ದೇಶದ ದೊಡ್ಡ ಸಮಸ್ಯೆಯಾಗಿ ಕಾಣಲಿಲ್ಲ. ಜಾತಿವಿನಾಶ ಮಾಡುವುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ಮೂಡಲಿಲ್ಲ. ಇದಕ್ಕೆ ಕಾರಣವಿಷ್ಟೇ, ರಾಷ್ಟ್ರೀಯ ಹೋರಾಟಗಳು ಮತ್ತು ಸುಧಾರಣಾ ವಾದಿಗಳ ಚಳುವಳಿಗಳು ಮೇಲ್ಜಾತಿ ಜನರ ಹೋರಾಟಗಳಾಗಿದ್ದವು.

ಜೋತಿಬಾ ಫುಲೆ 1885ರಲ್ಲಿ ತಮ್ಮ‌ ‘ಗುಲಾಮಗಿರಿ’ ಕೃತಿಯನ್ನು ಪ್ರಕಟಿಸಿದರು. 1885 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ ಕೂಡ. ಕಾಂಗ್ರೆಸ್ ನಾಯಕರು ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಾ ಸ್ವಾತಂತ್ರ್ಯ ಹೋರಾಟವನ್ನು ನಡೆಸುತ್ತಿದ್ದರು. ಇವರಿಗೆ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯುವುದೇ ಅಂತಿಮ ಗುರಿಯಾಗಿತ್ತು. ಜೊತೆಗೆ ಆಧುನಿಕತೆಯ ಕಡೆಗೆ ಮುಖ ಮಾಡಿದ್ದ ಮೇಲ್ಜಾತಿಯ ಸಮಾಜ ಸುಧಾರಕರು ಸುಧಾರಣಾವಾದಿ ನೆಲೆಯಲ್ಲಿ ಹಿಂದು ಧರ್ಮ ಸುಧಾರಣೆ ಮಾಡಲೆತ್ನಿಸುತ್ತಿದ್ದರು.

ಕಾಂಗ್ರೆಸ್ಸಿಗೆ ಮತ್ತು ಮೇಲ್ಜಾತಿಯ ಸುಧಾರಣಾವಾದಿಗಳಿಗೆ ಜಾತಿ ವ್ಯವಸ್ಥೆ ದೇಶದ ದೊಡ್ಡ ಸಮಸ್ಯೆಯಾಗಿ ಕಾಣಲಿಲ್ಲ. ಜಾತಿವಿನಾಶ ಮಾಡುವುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ಮೂಡಲಿಲ್ಲ. ಇದಕ್ಕೆ ಕಾರಣ ರಾಷ್ಟ್ರೀಯ ಹೋರಾಟವಾಗಲೀ, ಸುಧಾರಣಾ ಚಳುವಳಿಗಳಾಗಲೀ ಮೇಲ್ಜಾತಿಯ ಜನರ ಹೋರಾಟಗಳಾಗಿದ್ದಿದ್ದು. ಭಾರತದ ಸಾಮಾಜಿಕ ವ್ಯವಸ್ಥೆ ಮೇಲು ಜಾತಿಗಳಿಗೆ ಅನುಕೂಲಕರವಾಗಿಯೇ ಇವತ್ತಿಗೂ ಉಳಿದಿರುವುದರಿಂದ ಜಾತಿ ವ್ಯವಸ್ಥೆ ಒಂದು ಸಮಸ್ಯೆಯಾಗಿ ಮೇಲ್ಜಾತಿಗಳನ್ನು ಬಾಧಿಸುವುದಿಲ್ಲ. ಆದರೆ, ಹಿಂದುಳಿದ ಸಮುದಾಯದಿಂದ ಬಂದ ಜೋತಿಬಾ ಫುಲೆಯವರಿಗೆ ತನ್ನ ಸಾಮಾಜಿಕ ಹಿನ್ನಲೆಯ ಕಾರಣಕ್ಕೆ ಆದ ಅವಮಾನ ಜಾತಿ ವ್ಯವಸ್ಥೆಯ ಭೀಕರತೆಯನ್ನು ಅರ್ಥ ಮಾಡಿಸುತ್ತದೆ. ತನಗೆ ಆದ ಅವಮಾನ ಸಾಮಾಜಿಕವಾಗಿ ತನಗಿಂತಲೂ ಕೆಳಸ್ತರದಲ್ಲಿರುವ ಜನರ ಬಗ್ಗೆ ಹೆಚ್ಚು ಯೋಚಿಸುವಂತೆ ಮಾಡುತ್ತದೆ.

ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆಯ ಮೂಲಕ ಹೇಗೆ ಹಿಂದೂ ಧರ್ಮದ ಬಹುಸಂಖ್ಯಾತರನ್ನು ಮಾನಸಿಕ ಗುಲಾಮಗಿರಿಗೆ ತಳ್ಳಿದೆ ಮತ್ತು ಶೋಷಣೆ ಮಾಡುತ್ತಾ ಬಂದಿದೆ ಎನ್ನುವುದನ್ನು ತಮ್ಮ ಖಚಿತ ವಿಶ್ಲೇಷಣೆಯ ಮೂಲಕ ತೋರಿಸಿದರು. ಬ್ರಾಹ್ಮಣಶಾಹಿಯ ವಿರುದ್ಧ ಹೋರಾಟ ಶುರುಮಾಡಿ ಜಾತಿ ವ್ಯವಸ್ಥೆಯ ಬುಡಕ್ಕೆ ಪೆಟ್ಟು ಕೊಡುವುದಕ್ಕೆ ಶುರು ಮಾಡಿದರು. ಹಿಂದೂ ಧರ್ಮದ ಶೂದ್ರರು ಮತ್ತು ಅತಿಶೂದ್ರರು ಬ್ರಾಹ್ಮಣಶಾಹಿ ಮತ್ತು ಜಾತಿ ವ್ಯವಸ್ಥೆಯನ್ನು ನಾಶ ಮಾಡದಿದ್ದರೆ ತಮ್ಮ ಮೇಲೆ ಹೇರಿರುವ ಮಾನಸಿಕ ಗುಲಾಮಗಿರಿಯಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತೋರಿಸಿದರು. ಜಾತಿಯ ಪ್ರಶ್ನೆಗಳನ್ನು ಗಂಭೀರವಾಗಿ ಮುಖಾಮುಖಿಯಾಗಲು ನಿರಾಕರಿಸಿದ ರಾಷ್ಟ್ರೀಯವಾದಿ ಕಾಂಗ್ರೆಸ್ ನಾಯಕರು, ಸಮಾಜ ಸುಧಾರಕರನ್ನು ತೀವ್ರವಾಗಿ ಟೀಕೆ ಮಾಡಿದರು‌. ‘ಸತ್ಯಶೋಧಕ ಸಮಾಜ’ ಸ್ಥಾಪನೆ ಮಾಡುವ ಮೂಲಕ ಜಾತಿ ವ್ಯವಸ್ಥೆ, ಪುರುಷಾಧಿಪತ್ಯದ ವಿರುದ್ಧ ಹೋರಾಟ ರೂಪಿಸಿದರು. ಬ್ರಾಹ್ಮಣಶಾಹಿಯ ಮತ್ತೊಂದು ರೋಗವಾದ ಪುರುಷಾಧಿಪತ್ಯವನ್ನು ವಿರೋಧಿಸಿ ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದರು. ತಮ್ಮ ಪತ್ನಿ ಸಾವಿತ್ರಿಬಾಯಿಯವರಿಗೆ ಶಿಕ್ಷಣ ನೀಡುವ ಮೂಲಕ ಸಂಪ್ರದಾಯಸ್ಥರನ್ನು ಎದುರು ಹಾಕಿಕೊಂಡರು. ಸಾವಿತ್ರಿಬಾಯಿ ಜೊತೆಗೂಡಿ ದಲಿತರು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಶುರುಮಾಡಿದರು. ಜ್ಞಾನ, ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವ ಮಾತ್ರ ತಳಸಮುದಾಯಗಳನ್ನು ಬಿಡುಗಡೆ ಮಾಡಬಲ್ಲವು ಎನ್ನುವುದನ್ನು ಅರ್ಥಮಾಡಿಕೊಂಡಿದ್ದ ಫುಲೆ ಇವನ್ನು ಸಾಧಿಸಲು ತಳಸಮುದಾಯಗಳಿಗೆ ಅಡ್ಡಿಯಾಗಿರುವ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳ ವಿರುದ್ಧ ಸಿಡಿದೆದ್ದರು.

Advertisements

ಶ್ರೇಷ್ಠತೆಯನ್ನು ಪ್ರತಿಪಾದಿಸುವ ಬ್ರಾಹ್ಮಣಶಾಹಿ ಹೇಗೆ ಬಹುಸಂಖ್ಯಾತರನ್ನು ಯಾಮಾರಿಸಿದೆ ಎನ್ನುವುದನ್ನು ಹಿಂದೂ ಧರ್ಮದ ಶಾಸ್ತ್ರ, ಪುರಾಣಗಳನ್ನು ವಿಶ್ಲೇಷಿಸುವುದರ ಮೂಲಕ ತೋರಿಸಿದರು. ಬಲಿ ಚರ್ಕವರ್ತಿಯ ಮಿಥ್‌ಅನ್ನು ಬ್ರಾಹ್ಮಣ ಸಂಚಿನ ವಿರುದ್ಧ ತಿರುಗಿಸಿ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಆರ್ಯರ ವಿರುದ್ಧ ಈ ದೇಶದ ಮೂಲ ನಿವಾಸಿಗಳು ಮಾಡಬೇಕಾದ ಸಾಂಸ್ಕೃತಿಕ ರಾಜಕಾರಣದ ಮಾದರಿಯನ್ನು ರೂಪಿಸಿದರು.

ಫುಲೆ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಯನ್ನು ತಳಸಮುದಾಯಗಳ ಏಳಿಗೆಗೆ ಅಡ್ಡಿಯಾಗಿರುವ ಅಂಶಗಳು ಎಂದು ಯಾವತ್ತೋ ಗುರುತಿಸಿದರು. ಫುಲೆಯವರ ಚಿಂತನೆ ಮತ್ತು ಹೋರಾಟದ ಮುಂದುವರಿಕೆಯಾಗಿ ಬಂದ ಡಾ.ಬಿ.ಆರ್.ಅಂಬೇಡ್ಕರ್ ಜಾತಿವಿನಾಶದ ಹೋರಾಟವನ್ನು ಇನ್ನಷ್ಟು ವಿಸ್ತರಿಸಿ ತಳಸಮುದಾಯಗಳ ವಿಮೋಚಕನಾದರು. ಫುಲೆ, ಅಂಬೇಡ್ಕರ್ ಕೊಟ್ಟ ಎಚ್ಚರ ಕಣ್ಣನ್ನು ಮುಚ್ಚಿರುವ ಈ ತಳಸಮುದಾಯಗಳು ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳ ಎದುರು ಸೋಲುತ್ತಿವೆ.

ಈಗ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ಒಂದುಗೂಡಿ ಮತ್ತೆ ಪೇಶ್ವೆ ಭಾರತವನ್ನು ಸೃಷ್ಟಿ ಮಾಡುವ ರಣೋತ್ಸಾಹದಲ್ಲಿ ಕೇಕೆ ಹಾಕುತ್ತಿವೆ. ಹಿಂದುತ್ವದ ಹೆಸರಿನಲ್ಲಿ ನವ ಪೇಶ್ವೆಗಳು ರಾರಾಜಿಸುತ್ತಿದ್ದಾರೆ. ಬ್ರಾಹ್ಮಣಶಾಹಿ ತಳಸಮುದಾಯಗಳನ್ನು ಹಿಂದುತ್ವದ ಅಮಲಿಗೆ ತಳ್ಳಿದೆ. ಬ್ರಾಹ್ಮಣಶಾಹಿಯ ನಿರ್ಮೂಲನೆ ಮತ್ತು ಜಾತಿ ವಿನಾಶ ಮಾತ್ರ ಈ ದೇಶದ ತಳಸಮುದಾಯಗಳನ್ನು ಆ ಮೂಲಕ ಈ ದೇಶವನ್ನು ಉಳಿಸಬಲ್ಲದು ಎನ್ನುವ ಅರಿವನ್ನು ಕೊಟ್ಟ ಮಹಾತ್ಮ ಫುಲೆ ಈಗ ಈ ದೇಶದ ತಳಸಮುದಾಯಗಳಿಗೆ ದಾರಿ ದೀಪವಾಗಬೇಕು.

ಆದರೆ ಫುಲೆಯವರನ್ನು ಅರಿಯುವಲ್ಲಿ ಹಿಂದುಳಿದ ಸಮುದಾಯಗಳು ಸಂಪೂರ್ಣವಾಗಿ ಸೋತಿವೆ. ಫುಲೆ ರೂಪಿಸಿದ ಜಾತಿ ಮತ್ತು ಪುರುಷಾಧಿಪತ್ಯದ ವಿರುದ್ಧದ ಹೋರಾಟ ಕೇವಲ ದಲಿತರಿಗೆ ಮಾತ್ರ ಅಂತ ಭಾವಿಸಿ ಹಿಂದುಳಿದ ಸಮುದಾಯಗಳು ಫುಲೆಯವರನ್ನು ದಲಿತ ವಿಮೋಚಕ ಅಂತ ಭಾವಿಸಿಕೊಂಡಿವೆ. ಹಿಂದುತ್ವದ ಹಿಡಿತಕ್ಕೆ ಸಿಕ್ಕಿ ಮಾನಸಿಕ ಗುಲಾಮಗಿರಿಯಿಂದ ಬಳಲುತ್ತಿರುವ ದಲಿತ, ಹಿಂದುಳಿದವರಿಗೆ ಫುಲೆಯವರನ್ನು ಮುಟ್ಟಿಸಬೇಕಿದೆ.

ಆಧುನಿಕ ಭಾರತದ ಮೊಟ್ಟ ಮೊದಲ ವಿಮೋಚಕ ಮತ್ತು ನಿಜವಾದ ಮಹಾತ್ಮ ಜೋತಿಬಾ ಫುಲೆಯವರಿಗೆ ಗೌರವಪೂರ್ವಕವಾಗಿ ನಮನಗಳು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಶೂದ್ರ ಸಮುದಾಯವನ್ನು ಎಚ್ಚರಿಸುವ ಬರಹ .
    ಹಿಂದುತ್ವದ ಅಮಲು ಶೂದ್ರ ಯುವಕರನ್ನು ಆವರಿಸಿರುವ ಈ ಕ್ಷಣದಲ್ಲಿ ಅತ್ಯಂತ ಮಹತ್ವದ ಲೇಖನವಿದು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X