ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಪದಾಧಿಕಾರಿಗಳು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ ರಾಜ್ಯಸಂಚಾಲಕ ಹೆಚ್ ಮಲ್ಲೇಶ್ ಮಾತನಾಡಿ, “ಭಾರತದ ವೈದಿಕ ನಿರ್ಮಿತ ಶ್ರೇಣಿಕೃತ ಜಾತಿ ವ್ಯವಸ್ಥೆಯಿಂದ ಶತಮಾನ ಕಾಲ ಶೋಷಣೆಗೆ ಗುರಿಯಾಗಿರುವ ಅಸ್ಪೃಶ್ಯ ಸಮುದಾಯ ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಸ್ಥಾನಮಾನಗಳಿಂದ ವಂಚನೆಗೆ ಒಳಗಾಗಿದೆ. ದೇಶದ ಸಂಪತ್ತು, ಅಧಿಕಾರ, ಅದಾಯ ಮತ್ತು ಸಂವಿಧಾನಿತ ಸೌಲಭ್ಯಗಳು ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಆಗಬೇಕೆಂಬುದು ಮೀಸಲಾತಿ ವರ್ಗಿಕರಣದ ಆಶಯ” ಎಂದರು.
“ಕರ್ನಾಟಕದ ಪರಿಶಿಷ್ಟ ಜಾತಿಗಳ ಸಂವಿಧಾನದ ಶೇ.15ರಷ್ಟು ಮೀಸಲಾತಿ ಸೌಲಭ್ಯಗಳು, ತಾರತಮ್ಯ ಅಸಮಾನ ಹಂಚಿಕೆ ಪರಿಣಾಮವಾಗಿ 2005ರಲ್ಲಿ ರಚನೆಗೊಂಡಿರುವ ನ್ಯಾಯಮಾರ್ತಿ ಎ ಜೆ ಸದಾಶಿವ ವಿಚಾರಣಾ ಆಯೋಗ 2012ರಲ್ಲಿ ಸಲ್ಲಿಸಿರುವ ವರದಿ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
“ಈ ಹಿಂದಿನ ಸರ್ಕಾರದ ಸಚಿವ ಜೆ ಸಿ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ವರದಿಯಂತೆ ಪರಿಷ್ಕರಿಸಿ ಕೇಂದ್ರಕ್ಕೆ ಸಲ್ಲಿಸಿದ್ದರೂ ಅನುಮೋದನೆಗೊಂಡಿಲ್ಲ. ಕಾಂಗ್ರೆಸ್ ಸರ್ಕಾರ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು ಹಾಗೂ ಪ್ರಥಮ ಅಧಿವೇಶನದಲ್ಲಿ ಜಾರಿಗೊಳಿಸುವುದಾಗಿ ಭರವಸೆ ನೀಡಿದೆ. ಈಗ ಹಾಲಿ 2ನೇ ಚಳಿಗಾಲ ಅಧಿವೇಶನ ಪ್ರಾರಂಭಗೊಂಡಿದ್ದು, ವಿಧಾನಮಂಡಲ ಉಭಯ ಸದನಗಳಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಲೋಕ್ ಅದಾಲತ್‌ನಲ್ಲಿ 26 ಸಾವಿರ ಪ್ರಕರಣ ಇತ್ಯರ್ಥ; ಒಂದಾದ 9 ಜೋಡಿ
ಪ್ರತಿಭಟನೆಯಲ್ಲಿ ಸಿ. ಬಸವರಾಜ್, ಎಚ್ ನಿಂಗಪ್ಪ, ಕುಂದುವಾಡ ಮಂಜುನಾಥ್, ಜಿಗಳ ಹಾಲೇಶ್, ರಾಘವೇಂದ್ರ ಕಡೇಮನಿ, ಹೆಣ್ಣೂರು ಶ್ರೀನಿವಾಸ್, ಚಂದ್ರಪ್ಪ ಗೋಪನಾಳ್, ಚಂದ್ರಪ್ಪ ಎಲ್ ಆರ್ ಹೆಗ್ಗರೆ ರಂಗಪ್ಪ, ಹೆಚ್ ಸಿ ಮಲ್ಲಪ್ಪ, ಪಿ. ತಿಪ್ಪೇರುದ್ರಪ್ಪ ಸೇರಿದಂತೆ ಇತರರು ಇದ್ದರು.