ಗುರು ಕಾರುಣ್ಯವೇ ಸದಾಚಾರ, ಶಿವಾಚಾರ, ಪ್ರಸಾದ, ಸಂತೃಪ್ತಿ, ಗುರು ಇದ್ದರೆ ದೀಕ್ಷೆ ಮತ್ತು ಪರಮಾತ್ಮನ ಕೃಪೆ ಪಡೆಯಲು ಸಾಧ್ಯವಾಗುತ್ತದೆ ಎಂದು ವೇದಮೂರ್ತಿ ಬಸಯ್ಯಶಾಸ್ತ್ರಿ ಹೇಳಿದರು.
1998 ರಿಂದ 2008ನೇ ಶೈಕ್ಷಣಿಕ ಸಾಲಿನ ಗದಗ ಜಿಲ್ಲಾ ರೋಣ ತಾಲೂಕಿನ ಮಲ್ಲಾಪೂರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಎಸ್ ಎಸ್ ಪಾಗದ ಮಾತನಾಡಿ, “ಗುರು ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದುದು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರಗೆಳೆದು ಸಾಧಕನನ್ನಾಗಿ ಮಾಡುವಲ್ಲಿ ಗುರು ಮಹತ್ವದ ಪಾತ್ರ ಮಹಿಸುತ್ತಾನೆ” ಎಂದು ಹೇಳಿದರು.
1998 ರಿಂದ 2008ನೇ ಸಾಲಿನ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್ ಬಿ ಐಹೊಳೆ ಮಾತನಾಡಿ, “ಗುರು ಸ್ಮರಣೆಯು ಜಗತ್ತಿನಲ್ಲಿಯೇ ಅತಿಶ್ರೇಷ್ಠವಾದ ದಿವ್ಯ ಮಂತ್ರವಾಗಿದ್ದು, ಹರ ಮುನಿದರು ಗುರು ಕಾಯುವನು” ಎಂದು ಹೇಳಿದರು.
ಶಿಕ್ಷಕ ಕೆ ಬಿ ಹರ್ಲಾಪೂರ ಮಾತನಾಡಿ, “ವಿದ್ಯೆ ಯಾರ ಮನೆಯ ಸ್ವತ್ತು ಅಲ್ಲ ಪ್ರಾಮಾಣಿಕತೆಯಿಂದ ಸತತ ಪ್ರಯತ್ನ ಮಾಡುವವರಿಗೆ ಒಲಿಯುತ್ತದೆ” ಎಂದು ಹೇಳಿದರು.
ಶಿಕ್ಷಕಿ ಜಿ ಹಂಪಮ್ಮ ಮಾತನಾಡಿ, “ಮಕ್ಕಳಿಗೆ ಕಲಿಕೆಯ ಸಂದರ್ಭದಲ್ಲಿ ನೀಡುವ ಶಿಕ್ಷೆಗಳು ಆ ಸಂದರ್ಭದಲ್ಲಿ ತಪ್ಪಾಗಿ ಕಂಡರೂ ಮುಂದೆ ಆ ಮಗು ಸಾಧಕನಾಗಿ ಹೊರ ಹೊಮ್ಮಿದಾಗ ಅವು ಮಗುವಿಗೆ ಶಿಕ್ಷೆಗಳೇ ಶ್ರೇಷ್ಠವಾಗಿ ಕಾಣುತ್ತವೆ” ಎಂದು ಹೇಳಿದರು.
ಶಿಕ್ಷಕ ಎಸ್ ಎಸ್ ಹಿರೇಮಠ ಮಾತನಾಡಿ, “ಶಿಕ್ಷಕನ ನಿಜವಾದ ಸಾಧನೆ ಅವನ ವಿದ್ಯಾರ್ಥಿಗಳು ಮಾಡುವ ಸಾಧನೆಯ ಮೇಲೆ ನಿರ್ಧರಿತವಾಗುತ್ತದೆ. ಇಂದು ನೀವುಗಳು ಪ್ರೀತಿಯಿಂದ ಆಯೋಜಿಸಿರುವ ಈ ಗುರುವಂದನಾ ಕಾರ್ಯಕ್ರಮವೇ ಸಾಕ್ಷಿಯಾಗಿದೆ” ಎಂದು ಹೇಳೀದರು.
ವಿದ್ಯಾರ್ಥಿಗಳಾದ ಶೋಭಾ ಚಲವಾದಿ, ಸುಧಾ ಕಪಾಲಿ, ಶಿವರಡ್ಡಿ ದಾನರಡ್ಡಿ ಮುತ್ತು ತಳವಾರ, ಸಂತೋಷ ಹೂಗಾರ, ಶರಣು ಚಳಗೇರಿ, ರೇಣುಕಾ ಗಾರವಾಡ, ಪ್ರಕಾಶ ಚಳಗೇರಿ, ಸುನೀತಾ ಕವಲೂರ, ಗೌರಮ್ಮ ಅರಹುಣಸಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ದಿನಗಳ ಕುರಿತು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನ್ಯಾ. ಎ ಜೆ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಡಿಎಸ್ಎಸ್ ಆಗ್ರಹ
1998 ರಿಂದ 2008ನೇ ಸಾಲಿನ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್ ಬಿ ಐಹೊಳೆ, ವಿ ಎಸ್ ವಾಲಿ, ವಿ ಎಮ್ ಶಿರಗುಪ್ಪಿ, ಎ ಬಿ ಮೇಟಿ, ಜಿ ಹಂಪಮ್ಮ, ಜೆ. ಡಬ್ಲ್ಯೂ, ಬಣ್ಣಾ, ಆರ್ ಬಿ ಹೊಸಮನಿ, ಬಿ ಜಿ ಅಂಬೋಲಿ, ಎಸ್ ವಿ ಬಸವರಡ್ಡಿ, ಎಸ್ ವಿ ಜಕ್ಕನಗೌಡ್ರ ಮತ್ತು ಪ್ರೌಢಶಾಲೆಯ ಶಿಕ್ಷಕರುಗಳದ ಎಸ್ ಜಿ ಅಗಸಿಮುಂದಿನ, ಎಂ ಕೆ ಹನುಮಕ್ಕನವರ, ಎಚ್ ಎಸ್ ನೇಲಗಾರ, ಆರ್ ಎಸ್ ತ್ರಿಮಲ್ಲೆ, ಜೆ ಎಂ ಜೋಶಿ, ಎಸ್ ಎಸ್ ಹಿರೇಮಠ ಗುರುಗಳನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.