ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ಇತ್ತೀಚೆಗೆ ಬರ ಪರಿಹಾರದ ಮೊದಲ ಕಂತಿನಲ್ಲಿ ಪ್ರತೀ ರೈತನಿಗೆ ಎರಡು ಸಾವಿರ ರೂಪಾಯಿ ನೀಡಲು ಮುಂದಾಗಿದೆ. ಆದರೆ, ಭಿಕ್ಷುರಂತೆ ಸರ್ಕಾರ ನಮಗೆ ಎರಡು ಸಾವಿರ ರೂ. ಪರಿಹಾರ ನೀಡುತ್ತಿದೆ. ಆದರೆ, ಸರ್ಕಾರದ ಅಕೌಂಟಿಗೆ ನಾವೇ ಒಂದು ಸಾವಿರ ರೂಪಾಯಿ ನೀಡುತ್ತೇವೆ ಎಂದು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
50ಕ್ಕೂ ಮಂದಿಗೂ ಹೆಚ್ಚಿನ ರೈತರು ತಲಾ ಒಂದು ಸಾವಿರ ರೂಪಾಯಿ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಪ್ರತಿ ಎಕರೆಗೆ 30ಸಾವಿರ ರುಪಾಯಿವರೆಗೆ ಖರ್ಚು ಮಾಡಿದ್ದೇವೆ. ಆದರೆ, ಸರ್ಕಾರ ಮಾತ್ರ ಎರಡು ಸಾವಿರ ರೂಪಾಯಿ ಬರ ಪರಿಹಾರ ನೀಡಿ ನಮ್ಮನ್ನು ಭಿಕ್ಷುರಂತೆ ಕಾಣುತ್ತಿದೆ. ಇದು ನಮಗೆ ಸಿದ್ದರಾಮಯ್ಯ ನೇತ್ರತ್ವದ ಸರ್ಕಾರ ಅವಮಾನ ಮಾಡಿದಂತೆ. ನಮಗೆ 2ಸಾವಿರ ರೂಪಾಯಿ ಪರಿಹಾರವೆಂದು ವಿಷ ಕುಡಿಯಲು ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ವರ್ಷ ರೈತರು ಎರಡರಿಂದ ಮೂರು ಬಾರಿ ಬಿತ್ತನೆ ಮಾಡಿದ್ದೇವೆ. ಪ್ರತಿ ಬಾರಿ ಬಿತ್ತನೆ ಮಾಡಿದಾಗ ಪ್ರತಿ ಎಕರೆಗೆ 20-30 ಸಾವಿರ ಖರ್ಚು ಬಂದಿದೆ. ಆದ್ದರಿಂದ ರಾಜ್ಯ ಸರ್ಕಾರ ಎಕರೆಗೆ 15ಸಾವಿರ ರೂ. ನೀಡಬೇಕು. ಕೇಂದ್ರ ಸರ್ಕಾರ 15ಸಾವಿರ ರೂಪಾಯಿ ನೀಡಬೇಕು. ಇಲ್ಲದಿದ್ದರೆ ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ನಮ್ಮ ಹಣದಲ್ಲಿ ಭರ್ಜರಿ ಊಟ ಮಾಡಲಿ ಅಂತಾ ನಾವೇ ಅವರಿಗೆ ದುಡ್ಡು ಕೊಡುತ್ತೇವೆ ಎಂದು ರೈತರೆಲ್ಲರೂ ನೂರು, ಐದನೂರು ರೂಪಾಯಿ ನೋಟು ಪ್ರದರ್ಶನ ಮಾಡಿ ಪ್ರತಿಭಟಿಸಿದ್ದಾರೆ. ಈ ಸಂಬಂಧ ಸವಣೂರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಪ್ರತಿ ರೈತನ ಖಾತೆಗೆ ಕೇವಲ 2ಸಾವಿರ ನೀಡುವುದನ್ನ ಬಿಟ್ಟು ಪ್ರತಿ ಎಕರೆಗೆ ಕನಿಷ್ಠ 15ಸಾವಿರ ರೂ. ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹಾವೇರಿ ಜಿಲ್ಲೆಯ ಪ್ರತೀ ರೈತರಿಂದ ಒಂದು ಸಾವಿರ ಸಂಗ್ರಹಿಸಿ ಸಿಎಂ ಸಿದ್ದರಾಮಯ್ಯನವರಿಗೆ ನೀಡುತ್ತೇವೆ ಎನ್ನುತ್ತಿದ್ದಾರೆ ರೈತರು.