ಆರ್‌ಟಿಪಿಎಸ್ ಆಡಳಿತ ವೈಫಲ್ಯದಿಂದಾಗಿ ಕಾರ್ಮಿಕರು ಸೌಲಭ್ಯಗಳಿಂದ ವಂಚಿತವಾಗುತ್ತಿದ್ದು, ದ್ವಾರಸಭೆ ನಡೆಸಲು ಅನುಮತಿ ನಿರಾಕರಿಸುವ ಕ್ರಮಕ್ಕೆ ಮುಂದಾಗಿರುವುದನ್ನು ಆರ್‌ಟಿಪಿಎಸ್ ಗುತ್ತಿಗೆ ಕಾರ್ಮಿಕರ ಮಹಾಸಂಘದ ಅಧ್ಯಕ್ಷ ಅಯಣ್ಣ ಹೊಸಮನಿ ಖಂಡಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಆರ್‌ಟಿಪಿಎಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಕಳೆದ 25 ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಕಾರ್ಮಿಕ ಇಲಾಖೆ ಆಯುಕ್ತರ ಸೂಚನೆಯಂತೆ ಉಪಕಾರ್ಮಿಕ ಆಯಕ್ತರು ಕಲಬುರಗಿ ಇವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಮಾಹಿತಿ ಸಂಗ್ರಹಿಸಲು ಕೇಂದ್ರಕ್ಕೆ ಬಂದಿದ್ದರು. ಆದರೆ ಆರ್‌ಟಿಪಿಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದೆ ಕಾರ್ಮಿಕರನ್ನು ವಂಚಿಸಿದ್ದಾರೆ” ಎಂದು ಆರೋಪಿಸಿದರು.
“ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗುತ್ತಿಗೆದಾರರು ಸಮಗ್ರ ಮಾಹಿತಿ ನೀಡದೇ ಇರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಕಾರ್ಮಿಕರನ್ನು ಖಾಯಂಗೊಳಿಸಲು ಕಾರ್ಮಿಕ ಇಲಾಖೆ ಮಾಹಿತಿ ಸಂಗ್ರಹಿಸುತ್ತಿರುವುದರಿಂದ ಕಾರ್ಮಿಕರನ್ನು ವಂಚಿಸುವ ದುರುದ್ದೇಶವನ್ನು ಆರ್‌ಟಿಪಿಎಸ್ ಆಡಳಿತ ಹೊಂದಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ” ಎಂದರು.
“ಕಾರ್ಮಿಕರ ಯುಎಎನ್ ಸಂಖ್ಯೆ ಆಧಾರದ ಮೇಲೆ ಕಾರ್ಮಿಕರಿಗೆ ಮಾಹಿತಿ ನೀಡಲು ಡಿಸೆಂಬರ್ 11ರಂದು ಆರ್‌ಟಿಪಿಎಸ್ ಮುಖ್ಯ ದ್ವಾರಬಳಿ ದ್ವಾರಸಭೆ ನಿಗದಿಗೊಳಿಸಲಾಗಿತ್ತು. ಪೂರ್ವಭಾವಿಯಾಗಿ ಆರ್‌ಟಿಪಿಎಸ್ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ ಆರ್‌ಟಿಪಿಎಸ್ ಅಧಿಕಾರಿಗಳು ಪೊಲೀಸರ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ” ಎಂದು ಆರೋಪಿಸಿದರು.
“ನಿಷೇಧಿತ ಪ್ರದೇಶದಲ್ಲಿ ಸಭೆ ನಡೆಸಲು ಅವಕಾಶ ಇಲ್ಲವೆಂಬ ಕಾರಣವೊಡ್ಡಿ ಸಭೆ ತಡೆದಿದ್ದಾರೆ. ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನಿಷೇಧಿತ ಪ್ರದೇಶವೆಂದು ಹೇಳಿರುವುದು ಕಾರ್ಮಿಕ ಹಕ್ಕನ್ನು ಹತ್ತಿಕ್ಕುವ ತಂತ್ರವಾಗಿದೆ. ರಾಜಕೀಯ ಪ್ರೇರಿತವಾಗಿ ಆರ್‌ಟಿಪಿಎಸ್ ಅಧಿಕಾರಿಗಳು ವರ್ತಿಸುತ್ತಿದ್ದಾರೆ” ಎಂದರು.
ಸಂಘದ ಉಪಾಧ್ಯಕ್ಷ ಎಸ್ ಬಿ ಪಾಟೀಲ್ ಮಾತನಾಡಿ, “ಆರ್‌ಟಿಪಿಎಸ್‌ನಲ್ಲಿ ಗುತ್ತಿಗೆ ಕಾರ್ಮಿಕರನ್ನು ವಂಚಿಸುವ ಜೊತೆಗೆ ಕೋಟಿ ಕೋಟಿ ಟೆಂಡರ್‌ಗಳನ್ನು ಅನಧಿಕೃತವಾಗಿ ನಿರ್ವಹಿಸಲಾಗುತ್ತಿದೆ. ಕಾರ್ಮಿಕ ಇಲಾಖೆಯಿಂದ ಎಎಚ್‌ಪಿ ಮತ್ತು ಸಿಎಚ್‌ಪಿ-2ರಲ್ಲಿ ಪರವಾನಗಿ ನೀಡದೇ ಇದ್ದರೂ ಟೆಂಡರ್ ವಿಸ್ತರಿಸಲಾಗಿದೆ. ಕಾನೂನು ಬಾಹಿರವಾಗಿ ₹18 ಕೋಟಿ ಟೆಂಡರ್ ವಿಸ್ತರಿಸಲಾಗಿದೆ. ಆರ್ಥಿಕ ಅಕ್ರಮಗಳು, ನಿಯಮಗಳ ಉಲ್ಲಂಘನೆ, ಕಾರ್ಮಿಕರಿಗೆ ವಂಚಿಸುವುದು ಅವ್ಯಾಹುತವಾಗಿ ನಡೆಸಲಾಗುತ್ತಿದೆ. ರಾಯಚೂರು ಗ್ರಾಮೀಣ ಶಾಸಕ ದದ್ದಲ ಬಸನಗೌಡ ಇವರು ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಕುರಿತ ಏಕೆ ಮೌನವಾಗಿದ್ದಾರೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದಿದ್ದ ಉಪನ್ಯಾಸಕನ ವಿರುದ್ಧ ಮತ್ತೊಂದು ಆರೋಪ
“ಅನ್ಯಾಯ ಸರಿಪಡಿಸದೇ ಹೋದರೆ ಕಾನೂನಾತ್ಮಕ ಹೋರಾಟದೊಂದಿಗೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಂಗಾರೆಡ್ಡಿ, ಶ್ರೀನಿವಾಸ, ಮಹಾದೇವಪ್ಪ, ವೆಂಕಟೇಶ, ರವೀಂದ್ರ, ಸುರೇಶ, ಸಿದ್ದಪ್ಪ, ವಿಶ್ವನಾಥಪ್ಪ, ಈರಯ್ಯಸ್ವಾಮಿ ಇದ್ದರು.
ವರದಿ : ಹಫೀಜುಲ್ಲ