ತಿಮ್ಮಾಪೂರ ಏತ ನೀರಾವರಿ ಯೋಜನೆಗಾಗಿ ಭೂ ಖರೀದಿ ಮಾಡುತ್ತಿದ್ದು, ಎಕರೆಗೆ ಮಾರುಕಟ್ಟೆ ಬೆಲೆಯ ಮೂರರಷ್ಟು ಹಾಗೂ ರಸ್ತೆಬದಿ ಜಮೀನು ಇದ್ದಲ್ಲಿ ಶೇ.10ರಷ್ಟು ಹೆಚ್ಚುವರಿ ನೀಡಲಾಗುತ್ತದೆ ಎಂದು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.
ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, “ಸಿಂಧನೂರು ತಾಲೂಕಿನ ತಿಮ್ಮಾಪೂರ ಏತ ನೀರಾವರಿ ಯೋಜನೆಗೆ ಈಗಾಗಲೇ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ಯೋಜನೆಗೆ ಬೇಕಾಗುವ ಜಮೀನು ರೈತರಿಂದ ನೇರ ಖರೀದಿ ಮಾಡಲಾಗುತ್ತಿದೆ” ಎಂದರು.
“ತಿಮ್ಮಾಪೂರ ಏತ ನೀರಾವರಿ ಯೋಜನೆಗೆ 7 ರಿಂದ 8 ಗ್ರಾಮಗಳ ಮೂಲಕ ಏತ ನೀರಾವರಿಗೆ ಪೈಪ್‌ಲೈನ್ ಹಾದು ಹೋಗುತ್ತಿದೆ. ಈ ಗ್ರಾಮಗಳ ರೈತರಿಂದ ಯೋಜನೆಗೆ ಭೂಮಿ ಖರೀದಿ ಮಾಡಲಾಗುತ್ತಿದೆ. ಸಿಂಧನೂರು ತಾಲೂಕಿನ ಬಾದರ್ಲಿ ಹೋಬಳಿಯ ಒಳ ಬಳ್ಳಾರಿ, ಯದ್ದಲದೊಡ್ಡಿ, ತಿಮ್ಮಾಪೂರ, ಮಲದಿನ್ನಿ ತುಕನಟ್ಟಿ, ದಿಬ್ಬನಖೇಡ ಗ್ರಾಮಗಳ ಮೂಲಕ ಏತನೀರಾವರಿ ಹಾದು ಹೋಗುತ್ತಿದೆ” ಎಂದು ತಿಳಿಸಿದರು.
“ಭೂಮಿ ಖರೀದಿಗೆ ಹಿಂದಿನ 3 ವರ್ಷದ ಮಾರುಕಟ್ಟೆ ಬೆಲೆ ಮತ್ತು ಮಾರ್ಗಸೂಚಿ ಬೆಲೆಯನ್ನು ನಿಗದಿಪಡಿಸಲಾಗುತ್ತಿದೆ. ಯದ್ದಲದೊಡ್ಡಿ ಗ್ರಾಮದ ವ್ಯಾಪ್ತಿಯಲ್ಲಿ ಕರಿ ಜಮೀನು ಎಕರೆಗೆ ₹5.6 ಲಕ್ಷ ಇದ್ದು, ಇದೀಗ 3 ಪಟ್ಟು ನೀಡಲಾಗುತ್ತಿದೆ. ಖುಷ್ಕಿ ಜಮೀನಿಗೆ ಎಕರೆಗೆ ₹5.8 ಲಕ್ಷ ಇದ್ದು, ೩ ಪಟ್ಟುಗೆ ಖರೀದಿ ಮಾಡಲಾಗುತ್ತದೆ. ಜತೆಗೆ ರಸ್ತೆ ಬದಿಯಲ್ಲಿ ಜಮೀನು ಇದ್ದಲ್ಲಿ ಶೇ.10ರಷ್ಟು ನೀಡಲಾಗುತ್ತಿದೆ” ಎಂದು ತಿಳಿಸಿದರು.
“ಈ ಯೋಜನೆಗೆ 1 ಎಕರೆಯೊಳಗೆ ಇರುವ ಜಮೀನಿನಲ್ಲಿ ಮಧ್ಯದಲ್ಲಿ ಪೈಪ್‌ಲೈನ್ ಹಾದು ಹೋದಲ್ಲಿ ಉಳಿದ ಭೂಮಿಯಲ್ಲಿ ಉಳುಮೆ ಮಾಡಲು ಸಾಧ್ಯವಿಲ್ಲವೆಂದು ರೈತರ ವಾದವಾಗಿದೆ. ವ್ಯರ್ಥ ಭೂಮಿಯನ್ನು ಖರೀದಿಗೆ ನೀಡಲು ಸಿದ್ದವಿದ್ದು, ರೈತರ ಒತ್ತಾಯದ ಮೇರೆಗೆ, ಈ ಕುರಿತು ನೀರಾವರಿ ನಿಗಮಕ್ಕೆ ಪತ್ರ ಬರೆದು ರೈತರು ಭೂಮಿ ಪಡೆಯಲು ಅಧಿಕಾರಿಗಳಿಗೆ ತಿಳಿಸಿದ್ದರು. ಈ ಯೋಜನೆಗೆ ಒಳಪಡಿವ ರೈತರ ಜಮೀನುಗಳ ಕೆಲ ಸರ್ವೆ ನಂಬರ್ ಬಿಟ್ಟು ಹೋಗಿದ್ದು, ಆ ರೈತರನ್ನು ಕರೆದು ಸರ್ವೆ ನಂಬರ್ ಪಟ್ಟಿಯಲ್ಲಿ ಸೇರಿಸಿ, ರೈತರ ಎದುರಲ್ಲೇ ಸರ್ವೆ ಮಾಡಬೇಕು” ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಬ್ರಾಹ್ಮಣ ಮಹಿಳೆಯರು ಜನಿವಾರ ಧರಿಸುವುದಿಲ್ಲ – ಅವರೂ ಶೂದ್ರರೇ: ಭಗವಾನ್
7 ರಿಂದ 8 ಗ್ರಾಮಗಳು ಒಳಪಡುವ ಈ ಯೋಜನೆಯು ಅಯಾ ಗ್ರಾಮಗಳ ಮತ್ತು ಮಾರುಕಟ್ಟೆ ಬೆಲೆ ನಿಗದಿಯಂತೆ ಎಕರೆಗೆ 3ರಷ್ಟು ಹಾಗೂ ರಸ್ತೆ ಬದಿಯಲ್ಲಿರುವ ಜಮೀನುಗಳಿಗೆ ಶೇ.10ರಷ್ಟು ನಿಗದಿಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕರಾವ್ ನಾಡಗೌಡ, ಸಹಾಯಕ ಆಯುಕ್ತೆ ಮಹೆಬೂಬಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ರೈತರು ಇದ್ದರು.
ವರದಿ : ಹಫೀಜುಲ್ಲ