ಬೆಂಗಳೂರಿನಲ್ಲಿ ಪರಿಣಿತರ ಉನ್ನತ ಮಟ್ಟದ ಸಭೆ ನಡೆಸಿ ಕಾರಂಜಾ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭರವಸೆ ನೀಡಿದರು.
ಕಾರಂಜಾ ಮುಳುಗಡೆ ಸಂತ್ರಸ್ತರು ಬೀದರ್ ನಗರದಲ್ಲಿ ಕಳೆದ 530 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸಂತ್ರಸ್ತರ ಬೇಡಿಕೆ ಬಗೆಹರಿಸಲು ಸಂತ್ರಸ್ತರ ಮುಖಂಡರೊಂದಿಗೆ ಚರ್ಚಿಸಲು ಮಂಗಳವಾರ ಬೆಳಗಾವಿಗೆ ಕರೆಯಿಸಿಕೊಂಡು ಅವರೊಂದಿಗೆ ಸಭೆ ನಡೆಸಿ, ರೈತರ ಸಮಸ್ಯೆ ಆಲಿಸಿದರು.
ಕಾರಂಜಾ ಸಂತ್ರಸ್ತರ ಬೇಡಿಕೆಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಬೆಂಗಳೂರಿನಲ್ಲಿ ಪರಿಣಿತರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು. ಬೀದರ್ ಜಿಲ್ಲೆಯ ಸಚಿವ, ಶಾಸಕರನ್ನೊಳಗೊಂಡು ಸಭೆ ನಡೆಸಿ, ಸಂತ್ರಸ್ತರ ಬೇಡಿಕೆ ಈಡೇರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಇದಕ್ಕೆ ಮುಖ್ಯಮಂತ್ರಿಗಳ ಜೊತೆ ಜಿಲ್ಲೆಯ ಸಚಿವರು, ಶಾಸಕರು ಶೀಘ್ರದಲ್ಲಿ ಸಮಾಲೋಚನೆ ನಡೆಸಲು ತಿಳಿಸಿದರು.
ಕಾರಂಜಾ ಸಂತ್ರಸ್ತರ ನಿಯೋಗದ ನೇತೃತ್ವ ವಹಿಸಿದ ಲಕ್ಷ್ಮಣ ದಸ್ತಿ ಮಾತನಾಡಿ, “ಕಾರಂಜಾ ನೀರಾವರಿ ಯೋಜನೆಗೆ ಜಮೀನು ನೀಡಿದ ನೂರಾರು ರೈತ ಕುಟುಂಬಗಳು ನಿರ್ಗತಿಕರಾಗಿ ಮುಂಬೈ, ಪೂನಾ, ಬೆಂಗಳೂರು ಸೇರಿದಂತೆ ನಾನಾ ಕಡೆ ಗುಳೆ ಹೋಗಿದ್ದಾರೆ. ಸಂತ್ರಸ್ತರಿಗೆ ಸಮರ್ಪಕ, ವೈಜ್ಞಾನಿಕ ಆಧಾರದಂತೆ ಪರಿಹಾರ ಸಿಗದ ಕಾರಣ ಗುಳೆ ಹೋಗುವುದು ಮುಂದುವರೆದಿದೆ. ಕಾರಂಜಾ ಸಂತ್ರಸ್ತರ ನ್ಯಾಯಯುತ ಬೇಡಿಕೆ ಈಡೇರಿಸಲು ಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು” ಎಂದು ಕೋರಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಶ, ಕಾಂಗ್ರೆಸ್ ನಾಯಕಿ ಪ್ರಿಯಾಂಕ್ ಗಾಂಧಿ ಹಾಗೂ ನೀವು (ಡಿ.ಕೆ.ಶಿವಕುಮಾರ್) ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಿದ್ದೀರಿ. ಈಗ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಇದಕ್ಕೆ ಪೂರಕವಾಗಿ ತಕ್ಷಣ ಸ್ಪಂದಿಸಿ, ಮಾನವೀಯತೆ ಮಾನದಂಡದಂತೆ, ವಿಶೇಷ ಪ್ರಕರಣವೆಂದು ಪರಿಗಣಿಸಿ ಬೇಡಿಕೆ ಈಡೇರಿಸಬೇಕು” ಎಂದು ಮನವಿ ಮಾಡಿದರು.
ಕಾರಂಜಾ ಮುಳುಗಡೆ ಸಂತ್ರಸ್ತರ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಮಾತನಾಡಿ, “ದೀರ್ಘ ಕಾಲದಿಂದ ನಡೆದಿರುವ ನಮ್ಮ ನ್ಯಾಯಯುತವಾದ ಹೋರಾಟಕ್ಕೆ ಶೀಘ್ರ ಸ್ಪಂದಿಸಿ ನಮಗೆ ಕರೆಸಿ, ಸಮಸ್ಯೆ ಆಲಿಸಿರುವುದು ಸ್ವಾಗತಾರ್ಹ. ನಮ್ಮ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು” ಎಂದು ಕೋರಿದರು.
ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ :
“ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಅತ್ಯಲ್ಪ ಪರಿಹಾರವನ್ನಷ್ಟೇ ನೀಡಲಾಗಿದ್ದು, ನ್ಯಾಯಾಲಯದಲ್ಲಿ ಪ್ರಶ್ನಿಸಿದವರಿಗೆ ಹೆಚ್ಚುವರಿ ಪರಿಹಾರ ನೀಡಲಾಗಿದೆ. ಹೀಗಾಗಿ ಒಂದು ಬಾರಿಯ ಪ್ಯಾಕೇಜ್ ಘೋಷಿಸಿ, ಅನ್ಯಾಯಕ್ಕೆ ಒಳಗಾದ ಅನ್ನದಾತರಿಗೆ ನ್ಯಾಯ ಒದಗಿಸಬೇಕು ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ’ ಧ್ವನಿಗೂಡಿಸಿದರು.
“ಕಾರಂಜಾ ಜಲಾಶಯಕ್ಕಾಗಿ 1970ರ ದಶಕದಲ್ಲಿ ಭೂಮಿ, ಮನೆ ಕಳೆದುಕೊಂಡಿರುವ ಜನರು ನ್ಯಾಯಕ್ಕಾಗಿ ಐದು ದಶಕದಿಂದ ಹೋರಾಟ ಮಾಡುತ್ತಿದ್ದಾರೆ. ತಮ್ಮ ತಾತ ಮುತ್ತಾತನ ಕಾಲದಿಂದ ವಂಶ ಪಾರಂಪರ್ಯವಾಗಿ ಬಂದ ಅತ್ಯಮೂಲ್ಯವಾದ ಮತ್ತು ಬೆಲೆ ಕಟ್ಟಲಾಗದ ಜಮೀನು, ಮನೆಯನ್ನು ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ 1265 ರೂ.ಗಳಿಂದ 4186 ರೂ.ವರೆಗೆ ಪರಿಹಾರ ನೀಡಲಾಗಿದೆ. ಆದರೆ, ಆರ್ಥಿಕವಾಗಿ ಸಶಕ್ತರಾದ ಕೆಲವರು ತಮಗೆ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದಾಗ ಘನ ನ್ಯಾಯಾಲಯವು ಮಾರುಕಟ್ಟೆ ಮೌಲ್ಯವನ್ನು 15 ಸಾವಿರ ರೂ. ಎಂದು ನಿಗದಿ ಮಾಡಿ, ಬಡ್ಡಿ ಸಮೇತ ಹಣ ಪಾವತಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹೋದವರಿಗೆ 70 ಸಾವಿರ ರೂ.ವರೆಗೆ ಪರಿಹಾರ ನೀಡಲಾಗಿದೆ” ಎಂದು ವಿವರಿಸಿದರು.
“ನ್ಯಾಯಾಲಯಕ್ಕೆ ಹೋಗಲು ಸಾಧ್ಯವಾಗದ ಅಶಕ್ತ ರೈತರಿಗೆ ಅಲ್ಪ ಪರಿಹಾರ ದೊರೆತಿದೆ. ಹೀಗಾಗಿ ಪರಿಹಾರ ನೀಡಿಕೆಯಲ್ಲಿ ಅವರಿಗೆ ಅನ್ಯಾಯವಾಗಿದೆ. ಸ್ವಾಭಾವಿಕ ನ್ಯಾಯದಡಿಯಲ್ಲಿ ಈ ಅಶಕ್ತ ರೈತರಿಗೂ ಹೆಚ್ಚಿನ ಪರಿಹಾರ ನೀಡುವುದು ನ್ಯಾಯೋಚಿತವಾಗಿದೆ. ಕೋರ್ಟ್ ತೀರ್ಪಿನ ಅನ್ವಯ ಗರಿಷ್ಠ ಪರಿಹಾರ ನೀಡಿರುವ ರೀತಿಯಲ್ಲಿಯೇ ಒಂದು ಬಾರಿಯ ವಿಶೇಷ ಪ್ಯಾಕೇಜ್ ಘೋಷಿಸಿ, ಕಾರಂಜಾ ಯೋಜನೆಗಾಗಿ, ಭೂಮಿ, ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ” ಉಸ್ತುವಾರಿ ಸಚಿವರು ಕೋರಿದರು.
ಇದಕ್ಕೆ ಜಿಲ್ಲೆಯ ಸಚಿವರಾದ ರಹೀಂ ಖಾನ್ ಸೇರಿದಂತೆ, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಚಂದ್ರಶೇಕರ್ ಪಾಟೀಲ್, ಭೀಮರಾವ್ ಪಾಟಿಲ್, ಅರವಿಂದ್ ಕುಮಾರ್ ಅರಳಿ, ಶರಣು ಸಲಗರ್, ಡಾ.ಸಿದ್ದಲಿಂಗಪ್ಪ ಪಾಟೀಲ್ ಒಮ್ಮತದಿಂದ ಧ್ವನಿಗೂಡಿಸಿದರು. ಇದಕ್ಕೆ ಸ್ಪಂದಿಸಿದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಹಾನುಭೂತಿಯಿಂದ ಈ ಪ್ರಕರಣವನ್ನು ಪರಿಶೀಲಿಸುವ ಭರವಸೆ ನೀಡಿದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿಗಳೂ ಆದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಸಂತ್ರಸ್ತರ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ವಾಪಸ್ ಪಡೆಯಲು ತಿಳಿಸಿದರು. ಅದಕ್ಕೆ ಪ್ರತಕ್ರಿಯಿಸಿದ ಸಮಿತಿಯ ಹಿರಿಯ ಹೋರಾಟಗಾರ ಲಕ್ಷ್ಮಣ್ ದಸ್ತಿ ಪ್ರತಿಕ್ರಿಯಿಸಿ “ತಾವು ತಿಳಿಸಿರುವಂತೆ ಬೆಂಗಳೂರಿನಲ್ಲಿ ಪರಿಣಿತರ ಉನ್ನತ ಮಟ್ಟದ ಸಭೆ ನಡೆಸಿ ನಮ್ಮ ಬೇಡಿಕೆ ಈಡೇರಿಸಲು ಅಧಿಕೃತ ನಿರ್ಣಯ ಕೈಗೊಂಡ ನಂತರ ತಮ್ಮ ಸಲಹೆಗೆ ನಾವು ಮನ್ನಿಸುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಗನವಾಡಿಗಿಲ್ಲ ಸ್ವಂತ ಕಟ್ಟಡ; ಬಯಲು ರಂಗಮಂದಿರದ ಕೊಠಡಿಯೇ ಗತಿ
ಸಭೆಯಲ್ಲಿ ನೀರಾವರಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ನಿಯೋಗದ ಮುಖಂಡರಾದ ನಾಗಶೆಟ್ಟಿ ಹಂಚೆ, ವಿನಯಕುಮಾರ್ ಮಾಳಗೆ, ರೋಹನ್ ಕುಮಾರ್, ಮಲ್ಲಿಕಾರ್ಜುನ್ ಬೂಸೋನೋರ, ಮಹೇಶ್ ಮೂಲಗೆ, ಕೇದಾರನಾಥ ಪಾಟೀಲ್, ರಾಜಪ್ಪ ಕಮಲಾಪುರ, ವೀರಶೆಟ್ಟಿ ಮೂಲಗೆ, ರಾಮರೆಡ್ಡಿ ಪಾಟೀಲ್, ಭೀಮರೆಡ್ಡಿ, ಪ್ರಕಾಶ್ ಖೇಣಿ, ಈಶ್ವರಯ್ಯ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.