ಹಿಂದಿನ ಬಿಜೆಪಿ ಸರ್ಕಾರದವರು ಸುಮಾರು ನಾಲ್ಕು ಸಾವಿರ ಶಾಲೆಗಳನ್ನು ಮುಚ್ಚಿದ್ದಾರೆ. ಆದರೆ ಆ ಬಗ್ಗೆ ನಾವು ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಗಡಿಯಲ್ಲಿರುವ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ಸುದ್ದಿ ಬರುತ್ತಿದೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಉತ್ತರಿಸಿದ ಅವರು, “ಕೆಲವೊಂದು ಬಾರಿ ನಿಮಗೆ ಹಾಗೆ ಕಾಣಿಸುತ್ತದೆ. ಆದರೆ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ನಮ್ಮ ಮುಂದಿಲ್ಲ. ಹಿಂದಿನ ಸರ್ಕಾರದವರು ನಾಲ್ಕು ಸಾವಿರ ಶಾಲೆಗಳನ್ನು ಮುಚ್ಚಿದ್ದಾರೆ. ಬೇಕಾದರೆ ಲೆಕ್ಕ ಕೊಡುತ್ತೇನೆ. ಆ ಬಗ್ಗೆ ನಾವು ಚರ್ಚಿಸಲ್ಲ. ನಮ್ಮ ಸರ್ಕಾರವು ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಶಿಕ್ಷಕರ ನೇಮಕ ಚೆನ್ನಾಗಿ ಆಗಬೇಕು. ಆ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ” ಎಂದು ತಿಳಿಸಿದರು.
ಶಿಕ್ಷಣ ಹಕ್ಕು ಕಾಯಿದೆ(ಆರ್‌ಟಿಇ) ಮರು ತಿದ್ದುಪಡಿ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ, “ಹೌದು, ಈ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಅದನ್ನು ನೋಡಿಕೊಂಡು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಹಿಂದಿನ ಸರ್ಕಾರದವರು ಮಾಡಿದ ತಪ್ಪುಗಳನ್ನು ಅರ್ಧಕ್ಕರ್ದ ತಿದ್ದುವುದೇ ಕೆಲಸವಾಗಿ ಬಿಟ್ಟಿದೆ” ಎಂದು ತಿಳಿಸಿದರು.
“ಬೆಳಗಾವಿಯಲ್ಲಿ ಅಧಿವೇಶನದ ನಡುವೆ ಸಿಗುವ ಎರಡು ಗಂಟೆಗಳ ಬಿಡುವಿನ ವೇಳೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸೇರಿ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದೇನೆ. ಸಿಕ್ಕ ಸಮಯವನ್ನು ಹಾಳು ಮಾಡದೆ ಸಮಯ ಮೀಸಲಿಟ್ಟಿದ್ದೇನೆ. ಈಗಾಗಲೇ ಎರಡು ಮೂರು ಶಾಲೆಗಳನ್ನು ವಿಧಾನ ಪರಿಷತ್ ಸಭಾಪತಿ ಅವರೊಂದಿಗೆ ಸೇರಿ ಭೇಟಿ ನೀಡಿದ್ದೇನೆ. ಯಾಕೆಂದರೆ ಶಾಲೆಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿನ ಸಮಸ್ಯೆಗಳು ಏನೆಲ್ಲ ಇದೆ ಎಂಬುದು ಕೂಡ ನನಗೂ ಅರ್ಥವಾಗಬೇಕಿದೆ. ಈಗಾಗಲೇ ಆರು ತಿಂಗಳಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗೆ ಪ್ರಯತ್ನಿಸುತ್ತಿದ್ದೇವೆ” ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬಿಸಿಯೂಟದಲ್ಲಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ, “ಕೇವಲ ಆರೋಪ ಮಾಡಿದರೆ ಸಾಲದು. ಸೂಕ್ತ ವಿವರಗಳು ನನಗೆ ನೀಡಿದರೆ ನಾನು ಕ್ರಮ ಕೈಗೊಳುತ್ತೇನೆ. ಅದು ನನ್ನ ಕೆಲಸ. ಸುಮ್ಮನೆ ಯಾರೋ ಆರೋಪ ಮಾಡಿದರೆ ಆಗಲ್ಲ. ನಮ್ಮ ಇಲಾಖೆ ಬಹಳ ದೊಡ್ಡದು. ಇಂತಹ ದೂರುಗಳು ಬಂದರೆ ಸಂಬಂಧಪಟ್ಟವರ ಮೇಲೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
“ಬಿಜೆಪಿಯವರು ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿ ಎಂದರೆ ಸುಮ್ಮನೆ ಧರಣಿ ನಡೆಸುತ್ತಿದ್ದಾರೆ. ಕೇವಲ ರಾಜಕೀಯ ಲಾಭಕ್ಕಾಗಿ ಅಧಿವೇಶನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಇದು ಖಂಡನೀಯ” ಎಂದು ಸಚಿವ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.