ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಕಾಪು ಲೀಲಾಧರ ಶೆಟ್ಟಿ (68) ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿ (59) ಮಂಗಳವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಕೌಟುಂಬಿಕ ಹಾಗೂ ಆರ್ಥಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಇವರು ರಾತ್ರಿ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೌಮ್ಯ ಸ್ವಭಾವದವರಾಗಿದ್ದ ಲೀಲಾಧರ ಶೆಟ್ಟಿ ಕಾಪುವಿನಲ್ಲಿ ರಂಗ ತರಂಗ ಎಂಬ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಸದಾ ಸಮಾಜಪರ ಕಾಳಜಿ ಹೊಂದಿದ್ದ ಅವರು ಯಾವುದೇ ಕ್ಷಣದಲ್ಲಿ ಕೂಡ ಅಶಕ್ತರ ನೆರವಿಗೆ ಧಾವಿಸುತ್ತಿದ್ದರು. ಆದರೂ ಇತ್ತೀಚೆಗೆ ಹಣಕಾಸಿನ ತೊಂದರೆ ಕೂಡ ಹೊಂದಿದ್ದರು ಎನ್ನಲಾಗಿದೆ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲೀಲಾಧರ ಶೆಟ್ಟಿ ಕಲೆ, ಸಂಸ್ಕೃತಿ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದವರು. ಸಮಾಜಮುಖಿ ಕಾರ್ಯಗಳಿಂದ ಕಾಪು ಭಾಗದಲ್ಲಿ ‘ಲೀಲಣ್ಣ’ ಎಂದೇ ಪ್ರಸಿದ್ಧಿ ಪಡೆದಿದ್ದರು.
ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಲೀಲಾಧರ ಶೆಟ್ಟಿ ಕಾಪು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಒಮ್ಮೆ ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೂಡ ಆಗಿದ್ದರು.
ಇದನ್ನು ಓದಿದ್ದೀರಾ? ಸಾವರ್ಕರ್ ಫೋಟೋ ಬಗ್ಗೆ ಸ್ಪೀಕರ್ ನಿಲುವಿಗೆ ಆಕ್ಷೇಪಾರ್ಹ ಬರಹ: ಎಸ್‌ಡಿಪಿಐ ಮುಖಂಡನ ಬಂಧನ, ಬಿಡುಗಡೆ
ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಲೀಲಾಧರ ಶೆಟ್ಟಿ, ಕರಂದಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿದ್ದರು.
ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ…ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಆದಾಗ್ಯೂ, ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.