ದಾವಣಗೆರೆಯ ಹೆಗಡೆ ನಗರದ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ನಗರದ ನಿವೇಶನ ರಹಿತರ ಸರ್ವೆ ಮಾಡಿ ಆಶ್ರಯ ಮನೆ ನಿರ್ಮಾಣ ಮಾಡಲು ಒತ್ತಾಯಿಸಿ ಕರ್ನಾಟಕ ಜನಶಕ್ತಿ ಜಿಲ್ಲಾ ಘಟಕ ದಾವಣಗೆರೆ ಉಪವಿಭಾಗಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
ಹೆಗಡೆ ನಗರದ ನಿವಾಸಿಗಳು ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಿದ್ದು, ಅವರಿಗೆ ಮೂಲಭೂತ ಹಕ್ಕುಗಳಾದ ಮೂಲಭೂತ ಸೌಕರ್ಯಗಳನ್ನು ಈ ಕೂಡಲೇ ಒದಗಿಸಿ ಕೊಡಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು. ನೀರು, ಚರಂಡಿ, ರಸ್ತೆ, ವಿದ್ಯುತ್ ಸೇರಿ ಇತರೆ ಮೂಲಭೂತ ಸೌಕರ್ಯಗಳಿಲ್ಲದೆ ನಿವಾಸಿಗಳು ಬಳಲುತ್ತಿದ್ದಾರೆ. ಬೀದಿಯಲ್ಲೇ ಜೀವನ ಸಾಗಿಸುತ್ತಿದ್ದು ಈ ಕೂಡಲೇ ಜಿಲ್ಲಾಡಳಿತ ಅವರಿಗೆ ನೆರವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಜನಶಕ್ತಿ ಸಂಘಟನೆ ಒತ್ತಾಯಿಸಿತು.
ಅಲ್ಲದೆ ನಗರದ ಸ್ಲಂ ಮತ್ತು ವಸತಿ ನಿವೇಶನ ರಹಿತರಿಗೆ ಮನೆಗಳಿಲ್ಲದೇ ಅವರು ಜೀವನ ಸಾಗಿಸುವುದು ದುಸ್ತರವಾಗಿದೆ. ಇಲ್ಲಿ ವಾಸಿಸುವವರು ಕೂಲಿ ಕಾರ್ಮಿಕರು, ಕಾರ್ಮಿಕರು, ಬೀದಿ ವ್ಯಾಪಾರಿಗಳು, ರೈತ ಕಾರ್ಮಿಕರೂ ಸೇರಿದಂತೆ ಬಡವರ್ಗದ ಜನರಾಗಿದ್ದು, ಇವರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ಹಕ್ಕೊತ್ತಾಯ ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸತೀಶ್ ಅರವಿಂದ್, ಆದೀಲ್ ಖಾನ್, ರಾಮಾಂಜನೇಯ, ಮಹಮ್ಮದ್ ರಫೀಕ್, ರವೀಂದ್ರ, ಪವಿತ್ರ, ಹನುಮಂತ, ಸುರೇಶ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.