ರಾಯ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ವಿಷ್ಣು ದೇವ್ ಸಾಯಿ ಅವರು ಛತ್ತೀಸ್ಗಢದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿ ನಾಯಕರಾದ ಅರುಣ್ ಸಾವೊ ಮತ್ತು ವಿಜಯ್ ಶರ್ಮಾ ಅವರು ಛತ್ತೀಸ್ಗಢದ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿಯ ಪ್ರಮುಖ ಬುಡಕಟ್ಟು ನಾಯಕರಾದ ವಿಷ್ಣು ದೇವ್ ಸಾಯಿ ಅವರನ್ನು ಪಕ್ಷವು ಛತ್ತೀಸ್ಗಢದ ಹೊಸ ಮುಖ್ಯಮಂತ್ರಿಯಾಗಿ ಹೆಸರಿಸಿದ್ದು, ಒಂದು ವಾರದ ಕುತೂಹಲಕ್ಕೆ ತೆರೆ ಹಾಡಿದೆ. ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಜಯ ದಾಖಲಿಸಿತ್ತು.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಬಿಜೆಪಿಯ ಮೋಹನ್ ಯಾದವ್ ಪ್ರಮಾಣ ವಚನ
1990 ರಿಂದ ಬಿಜೆಪಿಯ ಪ್ರಮುಖ ಬುಡಕಟ್ಟು ನಾಯಕ, ವಿಷ್ಣುದೇವ್ ಸಾಯಿ ಅವರು ಛತ್ತೀಸ್ಗಢ ಬಿಜೆಪಿ ಅಧ್ಯಕ್ಷ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿ ಅವರು ಕೇಂದ್ರ ಸಚಿವರೂ ಆಗಿದ್ದರು.
ರಾಜ್ಯದಲ್ಲಿ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಿಜೆಪಿಯ ಪ್ರಬಲ ಪ್ರದರ್ಶನದ ನಂತರ ಛತ್ತೀಸ್ಗಢ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯಿ ಅವರನ್ನು ನೇಮಿಸುವ ನಿರ್ಧಾರಕ್ಕೆ ಪಕ್ಷ ಬಂದಿತು. ಪರಿಶಿಷ್ಟ ಪಂಗಡಗಳಿಗೆ (ಎಸ್ಟಿ) ಮೀಸಲಾದ 29 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ.