ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ಏಕಾಏಕಿ ಇಬ್ಬರು ಯುವಕರು ನುಗ್ಗಿದ ಘಟನೆಗೆ ಸಂಬಂಧಿಸಿ ಈವರೆಗೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.
ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್ ಕುರ್ಚಿಯತ್ತ ನುಗ್ಗಿದ ಇಬ್ಬರಲ್ಲಿ ಒಬ್ಬ ಯುವಕನನ್ನು ಮೈಸೂರಿನ ಮನೋರಂಜನ್ ಎಂದು ಗುರುತಿಸಲಾಗಿದೆ.
*If my son has done anything good. I support him. If he has done something wrong- I condemn it. Hang him. If he has done #something wrong for the #society. #Hang him* Devaraj- father of Manoranjan who illegally entered the #ParliamentAttack house. pic.twitter.com/iWC2nmIKXt
— Imran Khan (@KeypadGuerilla) December 13, 2023
ಘಟನೆ ನಡೆಯುತ್ತಿದ್ದಂತೆಯೇ ಇತ್ತ ಮೈಸೂರಿನ ವಿಜಯನಗರದಲ್ಲಿರುವ ಮನೋರಂಜನ್ ನಿವಾಸಕ್ಕೆ ಪೊಲೀಸರು ದೌಡಾಯಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಎಸಿಪಿ ಗಜೇಂದ್ರ ಪ್ರಸಾದ್, ವಿಜಯನಗರ ಪಿಐ ಸುರೇಶ್ ಭೇಟಿ ನೀಡಿ ಮನೋರಂಜನ್ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮನೋರಂಜನ್ ತಂದೆ ದೇವರಾಜೇಗೌಡ, ”ಮನೋರಂಜನ್ ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ 2014ರಲ್ಲಿ ಬಿಇ ಮುಗಿಸಿದ್ದ, ಮಗನಿಗೆ ಬಿಇ ಸೀಟನ್ನು ಎಚ್.ಡಿ.ದೇವೇಗೌಡರು ಕೊಡಿಸಿದ್ದರು. ಕೆಲಸ ಇರಲಿಲ್ಲ. ತೋಟಕ್ಕೆ ಬರ್ತಿದ್ದ, ಖರ್ಚಿಗೆ ಬೇಕಾದಾಗ ಕಾಸು ಈಸ್ಕೋತಿದ್ದ. 34 ವರ್ಷ ಆಯ್ತು, ಮದುವೆಯಾಗು ಅಂತಿದ್ದೆ, ಇರಪ್ಪ, ನಾನೇನೋ ಮಾಡಬೇಕು ಅಂತ ಹೇಳ್ತಿದ್ದ. ಯಾವಾಗಲೂ ವಿವೇಕಾನಂದ, ಭಗತ್ ಸಿಂಗ್ ಅಂಥವರ ಪುಸ್ತಕಗಳನ್ನು ಓದ್ತಿದ್ದ. ದೆಹಲಿ, ಬೆಂಗಳೂರಿಗೆ ಓಡಾಡುತ್ತಿದ್ದ. ಹೋಗೋನು, ಬರೋನು. ಆದರೆ ಎಲ್ಲಿಗೆ ಹೋಗ್ತಿದ್ದ ಅಂತ ಗೊತ್ತಿಲ್ಲ. ನಾವು ಯಾವ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ಆದರೆ ಪ್ರತಾಪ್ ಸಿಂಹಗೆ ಓಟು ಹಾಕಿದ್ದೇವೆ. ಅವನು ಮನೆಯಲ್ಲಿ, ಸಮಾಜದಲ್ಲಿ, ಸ್ನೇಹಿತರಲ್ಲಿ ಯಾರಿಗೂ ಕೆಟ್ಟದು ಮಾಡಿದೋನಲ್ಲ. ಈಗ ಯಾಕೆ ಈ ರೀತಿ ಮಾಡಿದ್ದಾನೆ ಎಂದು ಗೊತ್ತಿಲ್ಲ. ಅನ್ಯಾಯ ಮಾಡಿದ್ದಾನೆ ಅಂದ್ರೆ ಅವನು ನನ್ನ ಮಗನೇ ಅಲ್ಲ” ಎಂದರು.
“ಮಗ ಈ ಥರ ಮಾಡ್ತಾನೆ ಅಂತ ನನಗೆ ಗೊತ್ತಿರಲಿಲ್ಲ. ಅವನೇನಾದ್ರೂ ಒಳ್ಳೆಯದು ಮಾಡಿದ್ರೆ ದೇವರು ಕಾಪಾಡಲಿ. ಕೆಟ್ಟದ್ದನ್ನು ಮಾಡಿದ್ರೆ ನಾನು ಖಂಡಿಸುತ್ತೇನೆ. ಸಮಾಜಕ್ಕೆ ಅನ್ಯಾಯ ಮಾಡಿದ್ದಾನೆಂದರೆ ಆತ ನನ್ನ ಮಗನೇ ಅಲ್ಲ. ಯಾರೇ ಆಗಿರಲಿ, ಸಮಾಜಕ್ಕೆ ಒಳ್ಳೆಯದನ್ನಷ್ಟೇ ಮಾಡಬೇಕು. ತಪ್ಪು ಮಾಡಿದ್ದಾನೆಂದರೆ ಆತನನ್ನು ಗಲ್ಲಿಗೇರಿಸಲಿ” ಎಂದು ಬೇಸರದಿಂದ ದೇವರಾಜೇಗೌಡ ನುಡಿದಿದ್ದಾರೆ.