ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಹಿಂದುತ್ವ ಕೋಮುವಾದಿ ಸಂಘಟನೆಗಳು ದತ್ತ ಜಯಂತಿ ಆಚರಿಸಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 22 ರಿಂದ 27ರವರೆಗೆ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಬಾಬಾಬುಡನ್ ಗಿರಿಯಲ್ಲಿ ದತ್ತಪೀಠ ಮಾಡುತ್ತೇವೆಂದು ಹಿಂದುತ್ವ ಕೋಮುವಾದಿ ಸಂಘಟನೆಗಳು ವಿವಾದ ಸೃಷ್ಠಿಸಿವೆ. ವಿವಾದದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೀಗ, ಡಿಸೆಂಬರ್ 24, 25 ಹಾಗೂ 26 – ಮೂರು ದಿನಗಳ ಕಾಲ ದತ್ತ ಜಯಂತಿ ನಡೆಸಲು ವಿವಾದ ಸೃಷ್ಠಿಸಿರುವ ಸಂಘಟನೆಗಳು ಮುಂದಾಗಿವೆ. ಹೀಗಾಗಿ, ಇಡೀ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇಳಿದೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಾ ಹಾಗೂ ಬಾಬಾಬುಡನ್ ಗಿರಿ – ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ನಿರ್ಬಂಧ ವಿಧಿಸಲಾಗಿರುವ ದಿನಗಳಲ್ಲಿ ವಾರಾಂತ್ಯ ಮತ್ತು ಕ್ರಿಸ್‌ಮಸ್ ಇದ್ದು, ಹಲವಾರು ಪ್ರವಾಸಿಗರು ಈ ತಾಣಗಳಿಗೆ ಭೇಟಿ ನೀಡುವ ಸಾಧ್ಯತೆ ಇತ್ತು. ಆದರೆ, ನಿರ್ಬಂಧದಿಂದಾಗಿ ಪ್ರವಾಸಿಗರಿಗೆ ನಿರಾಶೆಯಾಗಿದೆ.