- ಸಿಎಸ್ ಸುಧೀರ್ ಮತ್ತು ತಂಡದ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಯುವತಿ
- ಜನರನ್ನು ವಂಚಿಸುವ ಉದ್ದೇಶದಿಂದ ಇಂಡಿಯನ್ ಮನಿ ಫ್ರೀಡಂ ಆ್ಯಪ್ ಜಾರಿಗೆ ತಂದ ಸುಧೀರ್; ಯುವತಿ
ಯುವಕ-ಯುವತಿಯರಿಗೆ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿ ತಮ್ಮ ಆ್ಯಪ್ ಪ್ರಚಾರಕ್ಕೆ ಬಳಸಿಕೊಂಡು ಹಣ ನೀಡದೇ ವಂಚಿಸಿರುವ ಆರೋಪದಡಿ ಇಂಡಿಯನ್ಮನಿ ಫ್ರೀಡಂ ಆ್ಯಪ್ ಸಿಇಒ ಸಿಎಸ್ ಸುಧೀರ್ ಅನ್ನು ಬನಶಂಕರಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಂಚನೆಗೀಡಾಗಿರುವ ಯುವತಿ ಸೇರಿ ಒಟ್ಟು 21 ಮಂದಿ ಸಿಎಸ್ ಸುಧೀರ್ ವಿರುದ್ಧ ದೂರು ದಾಖಲಿಸಿದ್ದಾರೆ. ಸುಧೀರ್ ಸೇರಿದಂತೆ ಒಟ್ಟು 23 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ, ಸುಧೀರ್ ಹಾಗೂ ಇತರ ಆರೋಪಿಗಳು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ತೆಗೆದುಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ನ್ಯಾಯಾಲಯ ಷರತ್ತು ವಿಧಿಸಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಸುಧೀರ್ ಮತ್ತು ಅವನ ತಂಡದ ವಿರುದ್ಧ ನಯನಾ ಎಂಬ ಮಹಿಳೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಜನರನ್ನು ವಂಚಿಸುವ ಉದ್ದೇಶದಿಂದ ಸುಧೀರ್ ಹಾಗೂ ಇನ್ನಿತರರು ಸೇರಿ ಈ ಆ್ಯಪ್ ಅನ್ನು ಜಾರಿಗೆ ತಂದಿದ್ದಾರೆ. ಈ ಆ್ಯಪ್ ಪ್ರಚಾರ ಮಾಡಲು ನಿರುದ್ಯೋಗಿಗಳನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಸುಧೀರ್ ಮತ್ತು ತಂಡ ಅಮಾಯಕ ಯುವಕ ಮತ್ತು ಯುವತಿಯರನ್ನು ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪತ್ನಿಗೆ ಐಎಎಸ್ ಅಧಿಕಾರಿಯಿಂದ ವರದಕ್ಷಿಣೆ ಕಿರುಕುಳ; ದೂರು ದಾಖಲು
“ಮೊದಲಿಗೆ ಇವರು ಝೂಮ್ ಮಿಟೀಂಗ್ ಮೂಲಕ ಎಲ್ಲರಿಗೂ ಒಂದು ವಾರದ ತರಬೇತಿ ನೀಡುತ್ತಾರೆ. ಅದರಲ್ಲಿ ಹಣ ಗಳಿಸುವುದಕ್ಕೆ ದಾರಿ ಮತ್ತು ಅವರ ಆ್ಯಪ್ ಅನ್ನು ಜನರಿಗೆ ಹೇಗೆ ತಲುಪಿಸಬೇಕು ಎಂದು ತಿಳಿಸುತ್ತಾರೆ. ಆ್ಯಪ್ ಅನ್ನು ಹೆಚ್ಚು ಜನರ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಸಿದರೇ, ಹೆಚ್ಚು ಜನರನ್ನು ಚಂದಾದಾರನ್ನಾಗಿ ಮಾಡಿದರೇ, ಪ್ರತಿ ತಿಂಗಳು ₹15,000 ಸಂಬಳ ನೀಡುವುದಾಗಿ ಹೇಳಿದ್ದಾರೆ. ಇನ್ನು ಹೆಚ್ಚು ಜನರು ಚಂದಾದಾರರಾದರೇ ಹೆಚ್ಚು ಹಣ ಗಳಿಸಬಹುದು ಎಂದೆನ್ನುತ್ತಾರೆ” ಎಂದು ಹೇಳಲಾಗಿದೆ.
“ಅವರು ಹೇಳಿದಂತೆಯೇ ಹಲವು ಯುವಕ-ಯುವತಿಯರು ಹಣ ಗಳಿಸಬಹುದೆಂದು ತಿಳಿದು ಸಂಬಂಧಿಕರು ಹಾಗೂ ಸ್ನೇಹಿತರನ್ನೇ ಚಂದಾದಾರರನ್ನಾಗಿ ಮಾಡಿಸಿದ್ದಾರೆ. ಯುವಕ–ಯುವತಿಯರಿಂದ ಎಲ್ಲ ಕೆಲಸ ಮಾಡಿಸಿಕೊಂಡ ಕಂಪನಿಯವರು, ನಿಗದಿತ ದಿನದೊಳಗೆ ಸಂಬಳ ನೀಡಿಲ್ಲ. ಕೆಲಸಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಯಾವುದೇ ಮಾಹಿತಿ ನೀಡಿಲ್ಲ. ಕಾರಣ ನೀಡದೇ ಎಲ್ಲರನ್ನೂ ಕೆಲಸದಿಂದ ತೆಗೆದಿದ್ದಾರೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.