ಈ ದಿನ ಸಂಪಾದಕೀಯ | ಹುಸಿ ದೇಶಭಕ್ತಿಯ ಆಕ್ರೋಶದಲ್ಲಿ ಸುಟ್ಟು ಹೋಗದಿರಲಿ ‘ಅತಿಕ್ರಮಣದ’ ಸಂದೇಶ

Date:

Advertisements
ಸಂಸತ್ತಿನ ಭದ್ರತೆಗೆ ಕನ್ನವಿಟ್ಟ ಈ ಕೃತ್ಯ ಖಂಡನೀಯ ಹೌದು. ಆದರೆ ಈ ಯುವಜನರು ನೀಡಿರುವ ಸಂದೇಶಗಳು ಈ ಖಂಡನೆಯ ಪ್ರವಾಹದಲ್ಲಿ ಕೊಚ್ಚಿ ಹೋಗಬಾರದು. ಹುಸಿದೇಶಭಕ್ತಿಯ ಆಕ್ರೋಶದಲ್ಲಿ ಸುಟ್ಟು ಹೋಗಕೂಡದು. ತಾಂಡವ ಆಡಿರುವ ನಿರುದ್ಯೋಗ ಯುವಜನರನ್ನು ಹತಾಶೆಗೆ ತಳ್ಳಿದೆ.

 

ಬುಧವಾರ ಲೋಕಸಭೆಯಲ್ಲಿ ನಡೆದ ಅತಿಕ್ರಮಣದ ನಾಟಕ ದೇಶದ ಎಚ್ಚೆತ್ತ ಯುವಜನರ ಬೇಗುದಿಗೆ ಬಾಯಿ ನೀಡಿದೆ. ಹುಸಿ ದೇಶಭಕ್ತಿ, ಹಿಂದುತ್ವ ಮತ್ತು ಮುಸ್ಲಿಮ್ ದ್ವೇಷದ ಮಂಕುಬೂದಿಯಲ್ಲಿ ಅವರನ್ನು ಸದಾ ಕಾಲಕ್ಕೂ ಕೈದಿಗಳನ್ನಾಗಿ ಇಡುವ ತಂತ್ರ ಫಲಿಸದು ಎಂಬ ಕಟು ಸಂದೇಶವನ್ನು ಆಳುವ ವರ್ಗದ ಮುಖಕ್ಕೆ ರಾಚಿದೆ.

ಸಂಸತ್ತಿನ ಭದ್ರತೆಗೆ ಕನ್ನವಿಟ್ಟ ಈ ಕೃತ್ಯ ಖಂಡನೀಯ ಹೌದು. ಆದರೆ ಈ ಯುವಜನರು ನೀಡಿರುವ ಸಂದೇಶಗಳು ಈ ಖಂಡನೆಯ ಪ್ರವಾಹದಲ್ಲಿ ಕೊಚ್ಚಿ ಹೋಗಬಾರದು. ಹುಸಿದೇಶಭಕ್ತಿಯ ಆಕ್ರೋಶದಲ್ಲಿ ಸುಟ್ಟು ಹೋಗಕೂಡದು. ತಾಂಡವ ಆಡಿರುವ ನಿರುದ್ಯೋಗ ಯುವಜನರನ್ನು ಹತಾಶೆಗೆ ತಳ್ಳಿದೆ. ಆಳುವ ವ್ಯವಸ್ಥೆ ಇವರನ್ನು ಅಲ್ಪಕಾಲಿಕ ರಾಜಕೀಯ ಲಾಭಕ್ಕಾಗಿ ಹಾದಿಬೀದಿಗಳ ಪುಂಡರನ್ನಾಗಿಯೂ ಗುಂಪುಹತ್ಯೆಯ ಹತಾರುಗಳನ್ನಾಗಿಯೂ, ಅನೈತಿಕ ಪೊಲೀಸರನ್ನಾಗಿಯೂ ಮಾಡಿ ಕಟ್ಟು ಹರಿದ ಪಂಜಿನಂತೆ ತೂರಿಬಿಟ್ಟಿದೆ. ಕಟ್ಟಕಡೆಗೆ ಈ ಕಿಡಿಗೊಂಚಲುಗಳು ಸುಡುವುದು ಸಮಾಜವನ್ನೇ ಎಂಬ ಕಟುಸತ್ಯವನ್ನು ಅರಿಯಬೇಕಿದೆ. ಪ್ರಚಂಡ ವ್ಯಕ್ತಿಪೂಜೆಯಲ್ಲಿ ಮೈಮರೆತ ದೇಶದ ದೇಹ ತೀವ್ರ ಗಾಯಗೊಂಡಿದೆ. ಅವಯವಗಳು ಜೋಮುಗಟ್ಟಿವೆ. ನೋವನ್ನು ಮಿದುಳಿಗೆ ಒಯ್ದು ಮುಟ್ಟಿಸುವ ನರವನ್ನು ಕಡಿದು ಕೆಡವಲಾಗಿದೆ. ‘ದೇಹಕ್ಕೆ ಬಿದ್ದ ಪೆಟ್ಟು ಮಿದುಳಿಗೆ ತಲುಪುತ್ತಿಲ್ಲ’ ಇಂತಹ ದೇಶವನ್ನು ಚುಚ್ಚಿ ಎಚ್ಚರಿಸುವುದೇ ಈ ‘ಅತಿಕ್ರಮಣ ಕೃತ್ಯ’ದ ಉದ್ದೇಶವೆಂಬುದು ಮೇಲ್ನೋಟಕ್ಕೆ ತೋರುತ್ತದೆ. ಇವರು ಸಿಡಿಸಿದ ಹೊಗೆಡಬ್ಬಿಗಳಿಂದ ಹೊರಟ ಹಳದಿ ಹೊಗೆ ನಿರಪಾಯಕಾರಿ ಎಂದೂ ಖುದ್ದು ಸ್ಪೀಕರ್ ಹೇಳಿದ್ದಾರೆ.

ತಾನಾಶಾಹೀ ನಹೀ ಚಲೇಗಿ’ (ಸರ್ವಾಧಿಕಾರಕ್ಕೆ ಧಿಕ್ಕಾರ), ‘ಭಾರತ್ ಮಾತಾ ಕೀ ಜೈ’ ಹಾಗೂ ‘ಜೈ ಭೀಮ್’ ಎಂಬ ಘೋಷಣೆಗಳನ್ನು ಮೊಳಗಿಸಿದ್ದಾರೆ. ಹಾಲಿ ಕೇಂದ್ರ ಸರ್ಕಾರದ ಕಾರ್ಯವೈಖರಿ ಕುರಿತು ಅಸಮಾಧಾನ ಹೊಂದಿದ್ದ ತಾವು ಮಣಿಪುರವನ್ನು ಸುಡುತ್ತಿರುವ ಗಲಭೆಗಳು, ರೈತರ ಪ್ರತಿಭಟನೆ ಹಾಗೂ ಹಣದುಬ್ಬರ ಕುರಿತು ದೇಶಕ್ಕೆ ಸಂದೇಶ ಕಳಿಸಲು ಬಯಸಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisements

ಅತಿಕ್ರಮಣದ ಕುರಿತು ಸೂಕ್ಷ್ಮಾತಿಸೂಕ್ಷ್ಮ ತನಿಖೆ ಮತ್ತು ಭದ್ರತೆಯ ಲೋಪದೋಷಗಳ ಕುರಿತು ಸುದೀರ್ಘ ಮರಣೋತ್ತರ ಪರೀಕ್ಷೆಗಳು ಜರುಗಲಿವೆ.

ತಮ್ಮ ಸ್ವಾತಂತ್ರ್ಯಕ್ಕಾಗಿ ನಗುನಗುತ್ತ ನೇಣಿಗೇರಿದ ಪ್ರಖರ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ತಮ್ಮ ಆದರ್ಶಮೂರ್ತಿ. ಆತ ಕೂಡ ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿ ಸಂದೇಶ ರವಾನಿಸಿದ್ದ. ಅವನ ಹೆಜ್ಜೆಗುರುತುಗಳಲ್ಲೇ ತಾವೂ ನಡೆದದ್ದಾಗಿ ಬಂಧಿತರು ಹೇಳಿದ್ದಾರೆ.

“ಸೋಲುತ್ತೇವೋ ಗೆಲ್ಲುತ್ತೇವೋ ಎಂದು ತಲೆಕೆಡಿಸಿಕೊಳ್ಳಬಾರದು. ಪ್ರಯತ್ನ ಮಾಡುವುದೇ ಮುಖ್ಯಪ್ರಯಾಣ ಎಷ್ಟು ಸೊಗಸಿನದೆಂದು ಇದೀಗ ಕಾದು ನೋಡಬೇಕಿದೆಪುನಃ ಭೇಟಿಯಾಗೋಣ” ಎಂಬುದು ಪಾರ್ಲಿಮೆಂಟ್ ಪ್ರವೇಶಕ್ಕೆ ಅರ್ಧದಿನ ಮುಂಚೆ ಸಾಗರ್ ಶರ್ಮಾ ಹಾಕಿದ್ದ ಇನ್‌ಸ್ಟಾಗ್ರಾಮ್ ಸಂದೇಶ. ಶರ್ಮಾ ತನ್ನನ್ನು ಬರಹಗಾರ, ಕವಿ ಹಾಗೂ ತತ್ವಜ್ಞಾನಿ ಎಂದು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕರೆದುಕೊಂಡಿದ್ದಾನೆ. ಶಿವ, ಕೃಷ್ಣ ಹಾಗೂ ಇತರೆ ದೇವತೆಗಳ ವಿಡಿಯೋಗಳು ಆತನ ಖಾತೆಯಲ್ಲಿವೆ. ನೀಲಂ ಆಝಾದ್ ಖಾತೆಯಲ್ಲಿ ಭಗತ್ ಸಿಂಗ್ ಮತ್ತು ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳಿವೆ. 2020-21ರ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡ ಚಿತ್ರಗಳನ್ನೂ ಆಕೆ ಹಾಕಿಕೊಂಡಿದ್ದಾಳೆ. ಶಿಂಧೆ ಕ್ರೀಡೆಗಳ ಪದಕವಿಜೇತ. ಝಾ ಜಾಲತಾಣ ಖಾತೆಯಲ್ಲಿ ಭಗತ್ ಸಿಂಗ್ ಚಂದ್ರಶೇಖರ ಆಝಾದ್, ಸುಭಾಷ್ ಚಂದ್ರಬೋಸ್ ಹಾಗೂ ರಾಜಾರಾಮ್ ಮೋಹನರಾಯ್ ಫೋಟೋಗಳಿವೆ.

ಬ್ರಿಟಿಷ್ ಸಾಮ್ರಾಜ್ಯದ ಕಿವುಡು ವ್ಯವಸ್ಥೆಯನ್ನು ಕದಲಿಸಲು 94 ವರ್ಷಗಳ ಹಿಂದೆ 1929ರಲ್ಲಿ ಇಬ್ಬರು ಪ್ರಖರ ದೇಶಪ್ರೇಮಿ ಯುವಕರು ಪ್ರೇಕ್ಷಕರ ಗ್ಯಾಲರಿಯಿಂದ ದೆಹಲಿಯ ಸೆಂಟ್ರಲ್ ಅಸೆಂಬ್ಲಿ ಹಾಲ್‌ಗೆ ಎರಡು ದುರ್ಬಲ ಬಾಂಬುಗಳನ್ನೂ, ಕ್ರಾಂತಿಕಾರಿ ಕರಪತ್ರಗಳನ್ನೂ ಎಸೆದು ಬ್ರಿಟಿಷ್ ವಿರೋಧದ ಮತ್ತು ಭಾರತಭಕ್ತಿಯ ಘೋಷಣೆಗಳನ್ನು ಕೂಗಿದ್ದರು. ಈ ಸೆಂಟ್ರಲ್ ಅಸೆಂಬ್ಲಿಯೇ ಅಂದಿನ ಅಧಿಕೃತ ಸಂಸತ್ ಸಭಾಂಗಣವಾಗಿತ್ತು. ಆ ಯುವಕರಿಬ್ಬರ ಹೆಸರುಗಳು ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್.

1919ರ ಮಾಂಟೆಗೋ ಚೆಲ್ಮ್ಸ್ ಫರ್ಡ್ ಸುಧಾರಣೆಗಳು ನಿಷ್ಫಲವಾಗಿದ್ದವು. ಭಾರತ ರಾಷ್ಟ್ರವಾದಿಗಳು ಬಯಸಿದ್ದ ಸ್ವಾಯತ್ತತೆ ಸಿಕ್ಕಿರಲಿಲ್ಲ. ಬದಲಿಗೆ ಬ್ರಿಟಿಷರ ದಮನಕ್ಕೆ ಮೇರೆಯಿಲ್ಲದಾಗಿತ್ತು. ಶಾಸನಸಭೆಗಳಲ್ಲಿ ಹೆಸರಿಗಷ್ಟೇ ಕುಳಿತಿರುತ್ತಿದ್ದ ಭಾರತೀಯರಿಗೆ ಯಾವ ಅಧಿಕಾರವೂ ಇರಲಿಲ್ಲ. ಚಂದ್ರಶೇಖರ ಆಝಾದ್ ನೇತೃತ್ವದ ‘ಹಿಂದುಸ್ತಾನ್ ಸೋಶಲಿಸ್ಟ್ ರಿಪಬ್ಲಿಕನ್ ಆರ್ಮಿ’ಯು (ಎಚ್.ಎಸ್.ಆರ್.) ‘ಭಾರತೀಯ ಸಂಸತ್’ ಎಂಬ ಕಪಟವನ್ನು ಕಳಚಲು ಹೊರಟಿತ್ತು.

ಗಡಚಿಕ್ಕುವ ಗದ್ದಲ ಮಾತ್ರವೇ ಕಿವುಡನ್ನು ಭೇದಿಸಬಲ್ಲದು ಎಂಬ ಪರಾಕ್ರಮಿ ಫ್ರೆಂಚ್ ಹುತಾತ್ಮನೊಬ್ಬನ ಅಜರಾಮರ ಮಾತುಗಳಿಂದ ನಮ್ಮ ಈ ಕ್ರಿಯೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದೇವೆ’ ಎಂದು ಶುರುವಿಟ್ಟುಕೊಂಡಿದ್ದವು ಎಚ್‌ಎಸ್‌ಆರ್‌ಎ ಕರಪತ್ರಗಳು. ಯಾರನ್ನಾದರೂ ಕೊಲ್ಲುವುದು ಅಥವಾ ಗಾಯಗೊಳಿಸುವುದು ಈ ಕ್ರಿಯೆಯ ಉದ್ದೇಶ ಆಗಿರಲಿಲ್ಲ. ಸೂರ್ಯನು ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ಉದ್ದಗಲಕ್ಕೂ ಅನುರಣಿಸುವ ಸಂದೇಶದ ರವಾನೆಯಷ್ಟೇ ಅವರ ಗುರಿಯಾಗಿತ್ತು.

ಆಝಾದ್ ಸಂಗಾತಿಗಳ ಈ ಕ್ರಿಯೆ ಪೂರ್ವಯೋಜಿತವಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ‘ಪೂರ್ವಭಾವಿ ತಾಲೀಮು’ ನಡೆಸಿ ನೋಡಿದ್ದರು. ಎರಡು ದಿನಗಳ ತರುವಾಯ 1929ರ ಏಪ್ರಿಲ್ ಎಂಟರಂದು ಇಬ್ಬರೂ ಪ್ರೇಕ್ಷಕರ ಗ್ಯಾಲರಿಯಲ್ಲಿ ಖಾಕಿ ಅಂಗಿ ಮತ್ತು ನಿಕ್ಕರ್ ಧರಿಸಿ ಕುಳಿತಿದ್ದರು. ಎರಡು ಬಾಂಬುಗಳನ್ನು ಎಸೆದ ನಂತರ ಪಿಸ್ತೂಲಿನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದು ಭಗತ್ ಸಿಂಗ್. ದತ್ ಕರಪತ್ರಗಳನ್ನೆಸೆದರೆ ಇಬ್ಬರೂ ಕೂಗಿದ್ದು ‘ಕ್ರಾಂತಿ ಚಿರಾಯುವಾಗಲಿ’, ‘ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ’ ಎಂಬ ಘೋಷಣೆಗಳನ್ನು. ಇಬ್ಬರೂ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಸುಲಭದಲ್ಲಿ ಸೆರೆಯಾದರು.

ನೆನ್ನೆಯ ಅತಿಕ್ರಮಣದ ತನಿಖೆ ಪ್ರಗತಿಯಲ್ಲಿದೆ. ಅಂದಿನ ಆ ದಾಳಿ ಮತ್ತು ಇಂದಿನ ಈ ದಾಳಿಯ ಉದ್ದೇಶಗಳು ಒಂದೇ ಆಗಿದ್ದವೆಂದು ಪ್ರಾಥಮಿಕ ನೋಟಕ್ಕೆ ತೋರುತ್ತದೆ.

ರಾಷ್ಟ್ರೀಯ ಭದ್ರತೆಸುರಕ್ಷತೆಯ ಮಂತ್ರವನ್ನು ಹಗಲಿರುಳು ಜಪಿಸಿ ಇತರೆ ಪ್ರತಿಪಕ್ಷಗಳನ್ನು ಬೀಳುಗಳೆದು ಅಧಿಕಾರದಲ್ಲಿ ಮೆರೆದಿರುವ ಪಕ್ಷ ಮೋದಿಅಮಿತ್ ಶಾ ಅವರ ಭಾರತೀಯ ಜನತಾಪಕ್ಷ. 2019ರಲ್ಲಿ ನಲವತ್ತಕ್ಕೂ ಹೆಚ್ಚು ಯೋಧರ ಬಲಿ ಪಡೆದ ಮಾರಕ ಸ್ಪೋಟ ನಡೆದದ್ದು ತನ್ನದೇ ಆಡಳಿತದ ಮೂಗಿನಡಿಯಲ್ಲಿ ಎಂಬುದನ್ನು ಮರೆಯದಿರಲಿ ಈ ಜೋಡಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X