ಮೇಕೆದಾಟು ಯೋಜನೆಗೆ ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ತೀರುವಳಿ ಅನುಮೋದನೆ ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯ ಟಿ ಎ ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಗಳು, “ಮೇಕೆದಾಟು ಯೋಜನೆಗೆ ಇದುವರೆಗೆ ಯಾವುದೇ ಭೂಮಿಯನ್ನು ವಶಪಡಿಸಿಕೊಂಡಿರುವುದಿಲ್ಲ. ಕರ್ನಾಟಕ ಮತ್ತು ತಮಿಳುನಾಡು ಅಂತರ ರಾಜ್ಯ ಗಡಿಯಲ್ಲಿರುವ ಸಿಡಬ್ಲೂಸಿ ಬಿಳಿಗುಂಡ್ಲುವಿನಲ್ಲಿ ಜುಲೈ 2023ರಿಂದ ನವೆಂಬರ್ 2023ರವರೆಗೆ 10.658 ಟಿಎಂಸಿ ನೀರನ್ನು ಹರಿಸಲಾಗಿದೆ” ಎಂದರು.
“ಸಂಕಷ್ಟ ಜಲ ವರ್ಷಗಳಲ್ಲಿ ನೀರಿನ ಹಂಚಿಕೆ ಕುರಿತು ಸೂತ್ರ ರೂಪಿಸುವ ಬಗ್ಗೆ ಕಾವೇರಿ ಜಲ ನಿಯಂತ್ರಣಾ ಸಮಿತಿಯ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆಗಳಲ್ಲಿ ಚರ್ಚಿಸಲಾಗುತ್ತಿದ್ದು ಸಂಕಷ್ಟ ಹಂಚಿಕೆ ಸೂತ್ರವು ಅಂತಿಮವಾಗಬೇಕಿದೆ” ಎಂದು ಸಚಿವರು ಸ್ಪಷ್ಟಪಡಿಸಿದರು.
“ಪ್ರಸ್ತುತ ಜಲವರ್ಷ 2023-24 ಆರಂಭದಿಂದಲೂ ಸಂಕಷ್ಟ ವರ್ಷವಾಗಿದ್ದರೂ ಸಹ ಸರ್ವೋಚ್ಚ ನ್ಯಾಯಾಲಯದ 2018ರ ಆದೇಶದಲ್ಲಿ ಮಾರ್ಪಡಿಸಿರುವಂತೆ ಕಾವೇರಿ ಜಲ ವಿವಾದ ನ್ಯಾಯಾಧೀಕರಣ ಆದೇಶದಲ್ಲಿ ಸಾಮಾನ್ಯ ಜಲ ವರ್ಷಕ್ಕೆ ನಿಗದಿಪಡಿಸಿರುವ ಪ್ರಮಾಣದಂತೆ ನೀರು ಹರಿಸಬೇಕೆಂದು ತಮಿಳುನಾಡು ರಾಜ್ಯವು ಕೋರಿರುವುದನ್ನು ರಾಜ್ಯವು ವಿರೋಧಿಸಿರುತ್ತದೆ. ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯವು ಸಹ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದೆ” ಎಂದರು.
“ರಾಜ್ಯದ ಕಾನೂನು ತಂಡವು ನ್ಯಾಯಾಲಯದಲ್ಲಿ ರಾಜ್ಯದ ಪ್ರಸ್ತುತ ಜಲ ಸಂಕಷ್ಟದ ಕುರಿತು ಪ್ರತಿಪಾದಿಸಿದೆ. ಕರ್ನಾಟಕದ ಜಲಾಯಶಯಗಳಲ್ಲಿ ಕಡಿಮೆ ಪ್ರಮಾಣದ ನೀರಿನ ಶೇಖರಣೆ ಹಾಗೂ ಕಡಿಮೆ ಒಳ ಹರಿವು ಸೇರಿದಂತೆ ಹಲವು ಅಂಶಗಳನ್ನು ರಾಜ್ಯವು ನ್ಯಾಯಾಲಯದ ಮುಂದೆ ಪ್ರತಿಪಾದಿಸಿದೆ” ಎಂದು ಹೇಳಿದರು.
“ಕೇಂದ್ರ ಸರ್ಕಾರ ಹಾಗೂ ರಾಜ್ಯಗಳು ಮಂಡಿಸಿದ ವಾದಗಳನ್ನು ಆಲಿಸಿ ಸಿಡಬ್ಲೂಆರ್‌ಸಿ ಸಿಡಬ್ಲೂಎಂಎ ಇವುಗಳಲ್ಲಿ ನೀರಾವರಿ ಕೃಷಿ ಇತ್ಯಾದಿ ವಿಷಯಗಳಲ್ಲಿ ಪರಿಣಿತರು ಇರುವುದನ್ನು ಉಲ್ಲೇಖಿಸಿ ಅದರ ನಿರ್ದೇಶನಗಳನ್ನು ನಿರಾಕರಿಸಲು ಕಾರಣವಿಲ್ಲವೆಂದು ಹಾಗೂ ಸಿಡಬ್ಲೂಎಂಎ ನಿರ್ದೇಶನಗಳನ್ನು ಕರ್ನಾಟಕವು ಪಾಲಿಸಿದೆ ಎಂದು ಸಿಡಬ್ಲೂಎಂಯು ಸಲ್ಲಿಸಿದ ಅಫಿಡವಿಟ್‌ನಲ್ಲಿಯ ಅಂಶಗಳನ್ನು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯವು 2023ರ ಸೆಪ್ಟೆಂಬರ್ 21ರಂದು ಆದೇಶದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ತಮಿಳುನಾಡು ರಾಜ್ಯದ ಅರ್ಜಿಯನ್ನು ತಿರಸ್ಕರಿಸಿ ಇತ್ಯರ್ಥಗೊಳಿಸಿದೆ” ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.