ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಒತ್ತಾಯಿಸಿ ಮಹಾರಾಷ್ಟ್ರದ ಸುಮಾರು 17 ಲಕ್ಷ ಸರ್ಕಾರಿ ನೌಕರರು ಗುರುವಾರದಂದು ಒಂದು ದಿನದ ಮುಷ್ಕರ ಹಮ್ಮಿಕೊಂಡಿದ್ದಾರೆ.
ರಾಜ್ಯ ಸರ್ಕಾರಿ ಅಧಿಕಾರಿಗಳು ಬುಧವಾರ ಸಂಜೆ ನೌಕರರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರೂ, ಮಾತುಕತೆಗಳು ಫಲಪ್ರದವಾಗದೆ, ಡಿಸೆಂಬರ್ 14 ರಿಂದ ಮುಷ್ಕರ ನಡೆಸುವ ಮೂಲ ಯೋಜನೆಯನ್ನು ಮುಂದುವರಿಸಲು ಸಂಘಗಳು ನಿರ್ಧರಿಸಿದವು. ಒಪಿಎಸ್‌ಗೆ ಆಗ್ರಹಿಸಿ ಮಹಾರಾಷ್ಟ್ರ ಸರ್ಕಾರಿ ನೌಕರರು ನಡೆಸುತ್ತಿರುವ ಎರಡನೇ ಮುಷ್ಕರ ಇದಾಗಿದೆ.
ಮಾರ್ಚ್ 2023 ರಲ್ಲಿ, ಇದೇ ರೀತಿಯ ಮುಷ್ಕರದ ನಂತರ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಹಳೆಯ ಮತ್ತು ಹೊಸ ಪಿಂಚಣಿ ಯೋಜನೆಗಳನ್ನು ಅಧ್ಯಯನ ಮಾಡಲು ಮಾಜಿ ಹಿರಿಯ ಅಧಿಕಾರಿಗಳಾದ ಸುಬೋಧ್ ಕುಮಾರ್, ಕೆಪಿ ಬಕ್ಷಿ ಮತ್ತು ಸುಧೀರ್ ಕುಮಾರ್ ಶ್ರೀವಾಸ್ತವ ಅವರನ್ನು ಒಳಗೊಂಡ ಸಮಿತಿಯನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಮೂರು ತಿಂಗಳಲ್ಲಿ ಶಿಫಾರಸುಗಳೊಂದಿಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮೊಬೈಲ್, ಲ್ಯಾಪ್‌ಟಾಪ್‌ಗಳ ವಶಪಡಿಸಿಕೊಳ್ಳುವ ಕುರಿತು ಹೊಸ ಮಾರ್ಗಸೂಚಿ ರಚಿಸಲು ಕೇಂದ್ರಕ್ಕೆ ಸುಪ್ರೀಂ ಗಡುವು
ತ್ರಿಸದಸ್ಯ ಸಮಿತಿಯು ನವೆಂಬರ್ 2023 ರಲ್ಲಿ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಅಜಿತ್ ಪವಾರ್ ಅವರಿಗೆ ತನ್ನ ವರದಿಯನ್ನು ಸಲ್ಲಿಸಿತು.
ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ವಿಧಾನ ಪರಿಷತ್ತಿನಲ್ಲಿ ಮಾತನಾಡಿದ್ದ ಡಿಸಿಎಂ ಅಜಿತ್ ಪವಾರ್, ಒಪಿಎಸ್ ಬೇಡಿಕೆಯ ಬಗ್ಗೆ ಸರ್ಕಾರವು ಸಕಾರಾತ್ಮಕವಾಗಿದೆ.ವರದಿಯನ್ನು ಅಧ್ಯಯನ ಮಾಡಿದ ನಂತರ ಮುಂದಿನ ಬಜೆಟ್ ಅಧಿವೇಶನದ ಮೊದಲು ಒಪಿಎಸ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದರು.
ಈ ಹಿಂದೆ, ಉಪ ಮುಖ್ಯಮಂತ್ರಿ ಮತ್ತು ಆಗಿನ ಹಣಕಾಸು ಸಚಿವ ದೇವೇಂದ್ರ ಫಡ್ನವಿಸ್ ಅವರು ತಾತ್ವಿಕವಾಗಿ ಒಪಿಎಸ್ ಅನುಷ್ಠಾನಕ್ಕೆ ಸರ್ಕಾರ ವಿರೋಧವಿಲ್ಲ ಎಂದು ಹೇಳಿದ್ದರು. ಸರ್ಕಾರವು ರಾಜ್ಯದ ಮೇಲೆ ಅದರ ಆರ್ಥಿಕ ಹೊರೆಯ ಪರಿಣಾಮಗಳನ್ನು ಅಧ್ಯಯನ ಮಾಡಲು ಬಯಸಿದ್ದು, ಅಧ್ಯಯನದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದರು.
ಪ್ರತಿಪಕ್ಷ ಕಾಂಗ್ರೆಸ್ ದೇಶಾದ್ಯಂತ ಒಪಿಎಸ್‌ಗೆ ಬೇಡಿಕೆ ಇಟ್ಟಿರುವ ಸಮಯದಲ್ಲಿ ಮಹಾರಾಷ್ಟ್ರ ಬಿಜೆಪಿ ಸರ್ಕಾರವು ಒಪಿಎಸ್ ಬಗ್ಗೆ ಸಕಾರಾತ್ಮಕ ನಿಲುವು ಹೊಂದಿರುವ ದೇಶದ ಮೊದಲ ರಾಜ್ಯವಾಗಿದೆ.