ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆ ತಡೆಯುವಲ್ಲಿ ನಮ್ಮ ಮೆಟ್ರೋ ಪ್ರಮುಖ ಪಾತ್ರ ವಹಿಸಿದೆ. ನಿತ್ಯ ಕೆಲಸಕ್ಕೆ ತೆರಳುವವರಿಗೆ ಮೆಟ್ರೋ ಅತ್ಯಂತ ಸಹಕಾರಿಯಾಗಿದೆ. ಮೆಟ್ರೋ ಹೊರಡುವ ಸಮಯದಲ್ಲಿ ಸ್ವಲ್ಪ ಏರುಪೇರಾದರೆ, ಸಾವಿರಾರು ಜನ ಪರದಾಡುವಂತಾಗುತ್ತದೆ. ಇದೀಗ, ಡಿ.15 ರಂದು ತಾಂತ್ರಿಕ ಸಮಸ್ಯೆಯಿಂದ ಹಸಿರು ಮಾರ್ಗದ ಮೆಟ್ರೋ ಸಂಚಾರ ಬರೋಬ್ಬರಿ ಒಂದು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಬಳಿಕ 10:50 ರಿಂದ ಸಾಮಾನ್ಯ ಸ್ಥಿತಿಗೆ ಮರಳಿದೆ.
“ಹಸಿರು ಮಾರ್ಗದ ಮೆಟ್ರೋ ಸೇವೆಗಳನ್ನು ಡಿ.15 ರಂದು ಬೆಳಗ್ಗೆ 10.50 ರಿಂದ ಸಾಮಾನ್ಯ ಸ್ಥಿತಿಗೆ ತರಲಾಗಿದೆ” ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಯಶವಂತಪುರ-ನಾಗಸಂದ್ರ ಹಾಗೂ ನಾಗಸಂದ್ರ-ಯಶವಂತಪುರ ಕಡೆಗೆ ಹೋಗುವ ಹಸಿರು ಮಾರ್ಗದ ಮೆಟ್ರೋ ಸಂಚಾರ ತಾಂತ್ರಿಕ ಸಮಸ್ಯೆಯಿಂದಾಗಿ ಒಂದು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಮೆಟ್ರೋ ನಿಲ್ದಾಣಕ್ಕೆ ಬಂದು ವಾಪಸ್ ಹೋಗುತ್ತಿದ್ದರು. ಕೆಲಕಾಲ ಪ್ರಯಾಣಿಕರು ಪರದಾಡುವಂತಾಯಿತು. ಜನರು ಬಸ್, ಆಟೋ ಹತ್ತುವಂತಾಯಿತು. ನಾಗಸಂದ್ರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗ ಇದಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಜೆ ತೆಗೆದುಕೊಂಡಿದ್ದಕ್ಕೆ ಕಂಪನಿ ಮ್ಯಾನೇಜರ್ ಕಿರುಕುಳ: ಕಾರ್ಮಿಕ ಆತ್ಮಹತ್ಯೆ
ಇನ್ನು ಈಗಾಗಲೇ ಹಣ ಕೊಟ್ಟು ಟೋಕನ್ ಪಡೆದ ಪ್ರಯಾಣಿಕರು ಪರದಾಡುವಂತಾಯಿತು. ಮೆಟ್ರೋ ಬೇಗ ಬರದ ಕಾರಣಕ್ಕೆ ವಾಪಸ್ ಹೋಗಲೂ ಸಾಧ್ಯವಾಗದೇ ಕೆಲಕಾಲ ಒದ್ದಾಡಿದರು. ಆಫೀಸ್‌ಗೆ ತೆರಳಲು ತಡವಾದ ಕಾರಣ ಅನಿವಾರ್ಯವಾಗಿ ಟೋಕನ್ ಬಳಸದೆ ಆಟೋ ಹತ್ತಿ ಹೊರಟಿದ್ದರು.