ಅತ್ಯಾಚಾರ ಪ್ರಕರಣಗಳಲ್ಲಿ ಅತ್ಯಾಚಾರ ಅಥವಾ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾದ ಕೂಡಲೇ ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಗರ್ಭಪಾತ ಹಕ್ಕುಗಳ ಬಗ್ಗೆ ಸಂತ್ರಸ್ತೆ ಮತ್ತು ಆಕೆಯ ಪೋಷಕರಿಗೆ ಮಾಹಿತಿ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಅತ್ಯಾಚಾರ ಸಂತ್ರಸ್ತೆ, 17 ವರ್ಷದ ಬಾಲಕಿ 24 ವಾರಗಳ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತ ಮಾಡಿಸಲು ಅನುಮತಿ ಕೋರಿ ಸಂತ್ರಸ್ತೆಯ ತಂದೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿದೆ. ಅತ್ಯಾಚಾರ ಪ್ರಕರಣ ದಾಖಲಾದ ಕೂಡಲೇ ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದೆ.
17 ವರ್ಷದ ಬಾಲಕಿಯ ಪ್ರಕರಣದಲ್ಲಿ ದೂರು ದಾಖಲಾದಾಗಲೇ ಆಕೆಗೆ ಗರ್ಭಪಾತ ಹಕ್ಕುಗಳ ಕುರಿತು ತಿಳಿಸಿದ್ದರೆ, ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರುವ ಅತ್ಯವೇ ಬರುತ್ತಿರಲಿಲ್ಲ. ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದರೆ, ಸಂತ್ರಸ್ತರಿಗೆ ಇರುವ ಹಕ್ಕುಗಳ ಬಗ್ಗೆ ತಿಳಿಸಬೇಕು. ಆಗ ಸಂತ್ರಸ್ತೆಯರು ಗರ್ಭಪಾತಕ್ಕೆ ಅನುಮತಿ ಕೋರಿ ಕೋರ್ಟ್‌ವರೆಗೂ ಬರುವುದು ತಪ್ಪುತ್ತದೆ ಎಂದು ಕೋರ್ಟ್ ಹೇಳಿದೆ.
ಅತ್ಯಾಚಾರ ಪ್ರಕರಣದ ಎಫ್ಐಆರ್ ದಾಖಲಿಸುವ ಸಮಯದಲ್ಲೇ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರಿಗೆ ವೈದ್ಯಕೀಯ ಗರ್ಭಪಾತದ ಕುರಿತು ಮಾಹಿತಿ ನೀಡಬೇಕು. ಆಗ, ತಡವಾಗಿ ಗರ್ಭಪಾತಕ್ಕೆ ಅನುಮತಿ ಕೋರುವಾಗ ಅವರು ಅನುಭವಿಸುವ ಮಾನಸಿಕ ಯಾತನೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಕೋರ್ಟ್ ಒತ್ತಿ ಹೇಳಿದೆ.
ಈ ಸುದ್ದಿ ಓದಿದ್ದೀರಾ?: ಭ್ರೂಣ ಹತ್ಯೆ ಪ್ರಕರಣ | ರಾಜ್ಯದಲ್ಲಿ ದೊಡ್ಡ ಜಾಲವೇ ಇದ್ದು, ಎಸ್‌ಐಟಿ ತನಿಖೆಗೆ ನೀಡಬೇಕು: ಆರ್ ಅಶೋಕ್
ಪೋಕ್ಸೋ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆಯ ಸೆಕ್ಷನ್ 376ರ ಅಡಿಯಲ್ಲಿ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಆಕೆ ಗರ್ಭಿಣಿಯಾಗಿದ್ದಾಳೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆಕೆ ಗರ್ಭಿಣಿಯಾಗಿದ್ದಲ್ಲಿ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು. ಅವರು ಗರ್ಭಾವಸ್ಥೆಯ ಪರಿಣಾಮ, ಸಂತ್ರಸ್ತೆಯ ದೈಹಿಕ ಮತ್ತು ಮಾನಸಿಕ ಸ್ಥಿತಿ, ಗರ್ಭಾವಸ್ಥೆಯ ಮುಂದುವರಿಕೆ, ಗರ್ಭಾವಸ್ಥೆಯ ಮುಕ್ತಾಯ ಹಾಗೂ ಕಾರ್ಯವಿಧಾನಗಳ ಬಗ್ಗೆ ಸಂತ್ರಸ್ತರಿಗೆ ಇಳಿಸಿಕೊಡಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಸಂತ್ರಸ್ತೆಗೆ ಗರ್ಭಪಾತದ ವೇಳೆ ಭ್ರೂಣದ ಅಂಗಾಂಶದ ಮಾದರಿಗಳನ್ನು ಸಂರಕ್ಷಿಸಬೇಕು. ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ಮತ್ತು ಡಿಎನ್‌ಎ ವಿಶ್ಲೇಷಣೆಗೆ ಕಳುಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.