ರಾತ್ರಿ ವೇಳೆ ಕರಡಿಯೊಂದು ಶಾಲಾ ಕೊಠಡಿಗೆ ನುಗ್ಗಿ, ಪೀಠೋಪಕರಣಗಳನ್ನು ಹಾನಿ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಸಂದನಪಾಳ್ಯದಲ್ಲಿರುವ ಸಂತ ಅಂಥೋಣಿ ಪ್ರೌಢಶಾಲೆಯಲ್ಲಿ ಗುರುವಾರ ರಾತ್ರಿ ಘಟನೆ ನಡೆಸಿದೆ. ಶಿಕ್ಷಕರ ವಿಶ್ರಾಂತಿ ಕೊಠಡಿಯ ಬಾಗಿಲು ಮುರಿದು ಕರಡಿ ಒಳ ನುಗ್ಗಿದೆ. ಕೊಠಡಿಯಲ್ಲಿ ಆಹಾರ ಪದಾರ್ಥಗಳನ್ನು ತಿಂದು, ಪೀಠೋಪಕರಗಳನ್ನು ಮುರಿದು ಹಾಕಿದೆ. ಕರಡಿ ದಾಳಿಯ ದೃಶ್ಯಗಳು ಶಾಕೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ತಿಳಿದುಬಂದಿದೆ.
ಮುರುದಿನ (ಶುಕ್ರವಾರ) ಶಾಲೆಯ ಮುಖ್ಯಶಿಕ್ಷಕ ಶಾಲೆಗೆ ಬಂದಾಗ ಘಟನೆ ನಡೆದಿರುವುದು ಗೊತ್ತಾಗಿದೆ. ಅವರು ಕೊಠಡಿಯನ್ನು ಪರಿಶೀಲನೆ ನಡೆಸಿದ್ದು, ಪುಸ್ತಕ, ಆಹಾರ ಸಾಮಗ್ರಿಗಳು ಹಾಗೂ ಪೀಠೋಪಕರಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.
ಬಳಿಕ, ಅವರು ಸಿಸಿಟಿವಿ ಪರಿಶೀಲಿಸಿದ್ದು, ಕರಡಿ ದಾಳಿ ಮಾಡಿರುವುದು ಗೊತ್ತಾಗಿದೆ. ಮುಖ್ಯಶಿಕ್ಷಕರು ಘಟನೆ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.