ಕಮಲೇಶ್‌ಚಂದ್ರ ವೇತನ ಆಯೋಗದ ವರದಿಯನ್ನು ಯಥಾವತ್ತು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ, ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘದ ಪದಾಧಿಕಾರಿಗಳು ದಾವಣಗೆರೆಯ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
“ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿರುವ ಅಂಚೆ ಸೇವಕರಿಗೆ 8 ಗಂಟೆ ಕೆಲಸ, ಪಿಂಚಣಿ ಒಳಗೊಂಡಂತೆ ಎಲ್ಲ ಸೌಲಭ್ಯ ಒದಗಿಸಬೇಕು. ಸೇವಾ ಹಿರಿತನದ ಆಧಾರದಲ್ಲಿ 12 ವರ್ಷ, 24, 36 ವರ್ಷ ಸೇವೆ ಸಲ್ಲಿಸಿದಂತಹ ನೌಕರರಿಗೆ ವಿಶೇಷ ಭತ್ಯೆ ನೀಡಬೇಕು” ಎಂದು ಒತ್ತಾಯಿಸಿದರು.
“ಗ್ರಾಮೀಣ ಅಂಚೆ ಸೇವಕರು ಪಡೆಯುವಂತಹ ಉಪಧನ ಮೇಲಿನ ಗರಿಷ್ಠ ಮೊತ್ತವಾದ 15 ಲಕ್ಷ ರೂಪಾಯಿ ಮಿತಿ ತೆಗೆದುಹಾಕಿ ಕಮಲೇಶ್ ಚಂದ್ರ ಸಮಿತಿ ಶಿಫಾರಸು ಮಾಡಿರುವಂತೆ ಗರಿಷ್ಠ 5 ಲಕ್ಷ ರೂಪಾಯಿವರೆಗೆ ಉಪ ಧನ ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
“ಗ್ರಾಮೀಣ ಅಂಚೆ ಸೇವಕರು ಮತ್ತು ಕುಟುಂಬ ಸದಸ್ಯರಿಗೆ ವೈದ್ಯಕೀಯ ಸೌಲಭ್ಯ ಒದಗಿಸಬೇಕು. 30 ದಿನಗಳ ವೇತನಸಹಿತ ರಜೆ ನೀಡಬೇಕು ಮತ್ತು 7ನೇ ವೇತನದ ಶಿಫಾರಸಿನಂತೆ 180 ದಿನಗಳವರೆಗೆ ರಜೆ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಸಾಮೂಹಿಕ ವಿಮಾ ಮೊತ್ತವನ್ನ 5 ಲಕ್ಷ ರೂಪಾಯಿವರೆಗೆ ಹೆಚ್ಚಿಸಬೇಕು” ಎಂದು ಒತ್ತಾಯಿಸಿದರು.
“ಗ್ರಾಮೀಣ ಅಂಚೆ ಸೇವಕರು ಹಲವಾರು ವರ್ಷಗಳಿಂದ ಕಮಲೇಶ್ ಚಂದ್ರ ಸಮಿತಿ ಶಿಫಾರಸಿನಂತೆ ವಿವಿಧ ಸೌಲಭ್ಯ ಒದಗಿಸಬೇಕು. ಆದರೆ, ಕೇಂದ್ರ ಸರ್ಕಾರ ಬೇಡಿಕೆ ಈಡೇರಿಸಲು ಮೀನಾಮೇಷ ಎಣಿಸುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಅನೇಕ ಇಲಾಖೆಗಳನ್ನು ಖಾಸಗೀಕರಣ ಮಾಡಿ ಅಧಿಕಾರಿ, ಸಿಬ್ಬಂದಿಯನ್ನ ಬೀದಿಪಾಲು ಮಾಡುತ್ತಿರುವುದು ಆತಂಕಕಾರಿ. ಗ್ರಾಮೀಣ ಭಾಗದಲ್ಲಿ ಜನರ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿರುವ ಸೇವಕರ ಬೇಡಿಕೆ ಈಡೇರಿಸುವರೆಗೆ ಹೋರಾಟ ಮುಂದುವರಿಯಲಿದೆ” ಎಂದು ತಿಳಿಸಿದರು.
ವಿಭಾಗೀಯ ಅಧ್ಯಕ್ಷ ಎ.ಎನ್. ಚಂದ್ರಪ್ಪ, ವಿಭಾಗೀಯ ಕಾರ್ಯದರ್ಶಿ ಕೆ.ಲಿಂಗರಾಜ್ ಅರಳಿಕಟ್ಟೆ, ಹುಚ್ಚರಾಯಶೆಟ್ಟಿ, ಮರುಳಸಿದ್ದಯ್ಯ, ಸಿ. ಶಾಂತಪ್ಪ, ನಾಗರಾಜ್, ಬೆನಕೇಶ್, ನಿಂಗಪ್ಪ, ಲೋಕೇಶ್‌ನಾಯ್ಕ, ಟಿ.ಕೆ. ಇನಾಯತ್ ಇತರರು ಇದ್ದರು.