ಅರ್ಹ ಪ್ರತಿ ಮತದಾರರು ತಮ್ಮ ಮತದಾನ ಮಾಡುವ ಪ್ರಕ್ರಿಯೆಯ ಕುರಿತು ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆಯನ್ನು ಅರಿಯಬೇಕು. ಚುನಾವಣೆಯ ಮತದಾನದ ದಿನದಂದು ಸರಿಯಾಗಿ ಮತ ಚಲಾಯಿಸುವ ಮೂಲಕ ಸುಭದ್ರ ಸರ್ಕಾರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಗದಗ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ವಿದ್ಯುನ್ಮಾನ ಮತಯಂತ್ರ ಪ್ರಾತ್ಯಕ್ಷಿಕೆ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ವಿದ್ಯುನ್ಮಾನ ಮತಯಂತ್ರದಲ್ಲಿ ಮತದಾನ ಮಾಡಿದ ನಂತರ ಅರ್ಹ ಮತದಾರರು ಚಲಾಯಿಸುವ ಮತವು ಚಲಾಯಿಸಿದ ಪಕ್ಷ ಅಥವಾ ವ್ಯಕ್ತಿಗೆ ದಾಖಲಾದ ಬಗ್ಗೆ ಖಾತರಿಪಡಿಸಿಕೊಳ್ಳಲು ವಿ.ವಿ.ಪ್ಯಾಟ ಯಂತ್ರ ಸಹಕಾರಿಯಾಗಿದೆ. ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಮತಯಂತ್ರಗಳು ಮತದಾನ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆಯನ್ನು ಮೂಡಿಸಲಿವೆ. ಯಾವುದೇ ಅಂಜಿಕೆ, ಭಯ, ನಿಷ್ಕಾಳಜಿ ತೋರದೇ ಪ್ರತಿ ಅರ್ಹ ಮತದಾರನು ತನ್ನ ಹಕ್ಕನ್ನು ಮತಗಟ್ಟೆಗೆ ಆಗಮಿಸಿ ಚಲಾಯಿಸಬೇಕು” ಎಂದರು.
ಮಾಸ್ಟರ್ ಟ್ರೇನರ್ ಬಸವರಾಜ ಗಿರಿತಿಮ್ಮಣ್ಣವರ ಅವರು ಮಾತನಾಡಿ, “ಚುನಾವಣೆಯ ಹಿನ್ನೆಲೆಯಲ್ಲಿ ಪ್ರತಿಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇ.ವಿ.ಎಂ) ಹಾಗೂ ವಿ.ವಿ.ಪ್ಯಾಟ್ ಪೆಟ್ಟಿಗೆ ಇಡಲಾಗುತ್ತದೆ. ಮತದಾರ ಮತಗಟ್ಟೆಗೆ ಮತ ಚಲಾಯಿಸಲು ಬಂದಾಗ ಮತಯಂತ್ರದಲ್ಲಿ ಹಸಿರು ದೀಪ ಉರಿಯುತ್ತಿರುವದನ್ನು ಖಚಿತಪಡಿಸಿಕೊಂಡು ಬ್ಯಾಲೇಟ್ ಯುನಿಟನಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರು, ಚಿಹ್ನೆಯ ಎದುರು ಇರುವ ನೀಲಿ ಗುಂಡಿ ಒತ್ತುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ನಂತರ ಕೆಂಪು ದೀಪ ಹಾಗೂ ಬೀಪ್ ಸದ್ದು ಮತದಾನವಾಗಿರುವದನ್ನು ಖಚಿತಪಡಿಸುತ್ತದೆ. ಬಳಿಕ ಪಕ್ಕದಲ್ಲಿರುವ ವಿ.ವಿ. ಪ್ಯಾಟಯಂತ್ರದಲ್ಲಿ ತಾವು ಮತ ಚಲಾಯಿಸಿದ ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಹಾಗೂ ಚಿಹ್ನೆಯನ್ನು ಒಳಗೊಂಡಿರುವ ಚೀಟಿಯನ್ನು ಏಳು ಸೆಕೆಂಡವರೆಗೆ ಮತದಾರ ನೋಡಿ ಮತದಾನವನ್ನು ಖಚಿತಪಡಿಸಿಕೊಳ್ಳಬಹುದು” ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರರು, ಸಿಬ್ಬಂದಿಗಳು, ಕಾಲೇಜು ಪ್ರಾಂಶುಪಾಲರು, ಸಾರ್ವಜನಿಕರು ಹಾಜರಿದ್ದರು.