ಜಾತೀಯತೆ ಆಚರಣೆಯನ್ನು ತಡೆಯಲು ಹಲವಾರು ಕಾನೂನುಗಳಿದ್ದರೂ, ಜಾತಿಯ ಕಾರಣಕ್ಕೆ ದೌರ್ಜನ್ಯ ಎಸಗುವ ಕೃತ್ಯಗಳು ನಡೆಯುತ್ತಲೇ ಇವೆ. ಬೈಕ್ ಖರೀದಿಸಿದ್ದಕ್ಕೆ, ಮೀಸೆಬಿಟ್ಟಿದ್ದಕ್ಕೆ, ಕಾಲು ಮೇಲೆ ಕಾಲು ಹಾಕಿ ಕುಳಿತಿದ್ದಕ್ಕೆ ದಲಿತರ ಮೇಲೆ ಹಲ್ಲೆ ಮಾಡಿದ, ಹತ್ಯೆಗೈದ ಹಲವಾರು ಘಟನೆಗಳು ನಡೆದಿವೆ. ಇದೀಗ, ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ದರೆ ಗ್ರಾಮದ ಎಲ್ಲ ದಲಿತರಿಗೂ ಬರಿಷ್ಕಾರ ಹಾಕಿ ದೌರ್ಜನ್ಯ ಎಸಗಲಾಗುತ್ತದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾ ಜಾತ್ರೆಯಲ್ಲಿ ಇಂತಹ ಅನಿಷ್ಟ ಪದ್ದತಿಯನ್ನು ಗ್ರಾಮದ ಜನರು ಆಚರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಜಾತ್ರೆಯಲ್ಲಿ ಹಲವರು ಕೋಣಗಳನ್ನು ದೇವರಿಗೆ ಬಲಿ ಕೊಡುತ್ತಾರೆ. ಆ ಕೋಣಗಳ ಮಾಂಸವನ್ನು ದಲಿತರು ತಿನ್ನಬೇಕು. ತಿನ್ನಲು ನಿರಾಕರಿಸಿದರೆ ಅವರಿಗೆ ಗ್ರಾಮದಿಂದ ಬಹಿಷ್ಕಾರ ಹಾಕುವ, ಗ್ರಾಮದೊಳಗೆ ಪ್ರವೇಶವಿಲ್ಲ ಎಂಬ ಜಾತೀಯತೆ ಅನುಕರಣೆಯ ನಿಯಮವನ್ನು ಹೇರಲಾಗಿದೆ ಎಂದು ತಿಳಿದುಬಂದಿದೆ.
ಈ ವರ್ಷ ಡಿಸೆಂಬರ್ 18ರಿಂದ ಗ್ರಾಮದಲ್ಲಿ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ಕೋಣ ಬಲಿಕೊಡಲು ಗ್ರಾಮದ ಎಲ್ಲ ಮನೆಗಳಿಂದಲೂ ಚಂದಾ ವಸೂಲಿ ಮಾಡಲಾಗುತ್ತದೆ ಎಂದೂ ಕೂಡ ಹೇಳಲಾಗಿದೆ.
ದಲಿತರಿಗೆ ಬಹಿಷ್ಕಾರ ಹಾಕುವ ಬೆದರಿಕೆಯ ಬಗ್ಗೆ ದಲಿತ ಸಂಘರ್ಷ ಸಮಿತಿಯ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಕೋಣದ ಬಲಿ ಹೆಸರಿನಲ್ಲಿ ನಡೆಯುತ್ತಿರುವ ಮೌಡ್ಯಾಚರಣೆಯನ್ನು ತಡೆಯಬೇಕು. ದಲಿತರಿಗೆ ಬಹಿಷ್ಕಾರ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.