ದೇಶದಲ್ಲಿ ನಿರುದ್ಯೋಗ, ಬಡತನ, ಹಸಿವು, ಮಹಿಳೆಯರ ಮೇಲೆ ದೌರ್ಜನ್ಯ ಸೇರಿದಂತೆ ಜ್ವಲಂತ ಸಮಸ್ಯೆಗಳ ಕುರಿತು ಚಿಂತನೆ ನಡೆಸದ ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಿಸುವುದೇ ಅವರ ಚಿಂತೆಯಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ ಹೇಳಿದರು.
ಬೀದರ್ ನಗರದ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಶುಕ್ರವಾರ ಆಯೋಜಿಸಿದ್ದ ಸಂವಿಧಾನ ರಕ್ಷಣೆಗಾಗಿ-ಪ್ರಜಾಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, “ರಾಮ ಮಂದಿರ ಕಟ್ಟುವುದರಿಂದ ಉದ್ಯೋಗ, ಶಿಕ್ಷಣ ದೊರಕಲು ಸಾಧ್ಯವೇ, ಇದರಿಂದ ಯಾರಿಗೆ ಲಾಭವಿದೆ ಎಂಬುದು ಪ್ರಶ್ನಿಸಬೇಕಿದೆ. ರಾಮ ಮಂದಿರ ಕಟ್ಟುವುದರ ಹಿಂದೆ ಯಾರ ಸಂಚಿದೆ ಎಂದು ಅರ್ಥಮಾಡಿಕೊಳ್ಳಬೇಕು” ಎಂದರು.
“ಕಳೆದ 9 ವರ್ಷಗಳಲ್ಲಿ ಕೇಂದ್ರದ ಮೋದಿ ಸರ್ಕಾರದ ದೇಶದಲ್ಲಿ ಶಿಕ್ಷಣ, ಉದ್ಯೋಗ ಖಾಸಗೀಕರಣಗೊಳಿಸಲು ಮುಂದಾಗಿ ದೇಶದ ನಾಲ್ಕು ದೊಡ್ಡ ಉದ್ಯೋಮಪತಿಗಳಿಗೆ ದೇಶದ ಸಂಪತ್ತು ಹಂಚಿಕೆ ಮಾಡಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಸಾಮಾಜಿಕ ನ್ಯಾಯವನ್ನು ಸಂಪೂರ್ಣವಾಗಿ ನಾಶಗೊಳಿಸಲು ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಎಚ್ಚರಗೊಂಡು ಸಂವಿಧಾನದ ಆಶಯಗಳನ್ನು ರಕ್ಷಿಸಲು ಜಾಗೃತರಾಗಬೇಕು” ಎಂದು ಕರೆ ನೀಡಿದರು.
ʼಮನುಸ್ಮೃತಿʼ ಜೀವವಿರೋಧಿಯಾಗಿದೆ:
ಮನುಧರ್ಮ ಶಾಸ್ತ್ರ ಜೀವವಿರೋಧಿ ಮತ್ತು ಮಹಿಳಾ ವಿರೋಧಿಯಾಗಿದೆ. ಮನುಸ್ಮೃತಿಯಲ್ಲಿ ಬರೀ ಪುರೋಹಿತರಿಗೆ ಮಾತ್ರ ಅವಕಾಶವಿದೆ. ಇನ್ನುಳಿದವರು ಅವರು ಹೇಳಿದಂತೆ ಗುಲಾಮರಾಗಿ ಬದುಕಬೇಕಾಗುತ್ತದೆ. ಹಾಗಾಗಿಯೇ ಅಂದು ಬಾಬಾ ಸಾಹೇಬರು ಅಸಮಾನತೆ ಪ್ರತಿಪಾದಿಸುವ ಮನುಸ್ಮೃತಿ ಸುಟ್ಟು ಹಾಕಿದರು. ಮನುಸ್ಮೃತಿ ಇರುವ ಕಡೆ ಸಂವಿಧಾನ ಇರುವುದಿಲ್ಲ, ಸಂವಿಧಾಣ ಇರುವ ಕಡೆ ಮನುಸ್ಮೃತಿ ಇರುವುದಿಲ್ಲ. ಹೀಗಾಗಿ ಧರ್ಮ ರಕ್ಷಿತಿ ರಕ್ಷತಃ ಬದಲು ಸಂವಿಧಾನ ರಕ್ಷತಿ ರಕ್ಷತಃ ಎಂದು ಗಟ್ಟಿಯಾಗಿ ಹೇಳಬೇಕು. ಕೇಂದ್ರ ಬಿಜೆಪಿ ಸರ್ಕಾರ ಜನ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಿ ಸರ್ವಾಧಿಕಾರಿ ಧೋರಣೆ ತೋರುವುದು ಆತಂಕದ ಬೆಳವಣಿಗೆಯಾಗಿದೆ. ಜನಸಾಮಾನ್ಯರ ಅರಿವಿಗೆ ಸಂವಿಧಾನದ ಆಶಯಗಳು ಮುಟ್ಟಿಸುವ ಕಾಳಜಿಯಿಂದ ರಾಜ್ಯಾದ್ಯಂತ ಅನೇಕ ಚಳವಳಿಗಳೊಂದಿಗೆ ಮೂಲಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ” ಎಂದು ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರರ ಎರಡನೇ ಅವತಾರ ಮಲ್ಲಿಕಾರ್ಜುನ್ ಖರ್ಗೆ :
ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹುಮನಾಬಾದ್ ಸಮಾವೇಶ ಉದ್ಟಾಟಿಸಿ ಮಾತನಾಡಿ, ದೇಶದ ಸಂವಿಧಾನ ಸರ್ವಶ್ರೇಷ್ಠವಾಗಿದೆ. ಅದರಲ್ಲಿ ಸರ್ವ ಜಾತಿ-ಧರ್ಮಗಳಿಗೂ ಸಮಾನತೆಯ ಹಿತ ಅಡಕವಾಗಿದೆ. ಸೂರ್ಯ-ಚಂದ್ರ ಇರುವವರೆಗೂ ಯಾರಿಂದಲೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
“ದೇಶದಲ್ಲಿ ಒಬ್ಬ ದಲಿತ ಪ್ರಧಾನಿಯಾಗಬೇಕೆಂಬ ಆಶಾಭಾವನೆ ಎಲ್ಲರ ಆಸೆಯಂತೆ ನನ್ನದೂ ಇದೆ. ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಬದಲಾವಣೆ ಬಯಸುವ ಲಕ್ಷಣಗಳು ಗೋಚರಿಸುತ್ತವೆ. ಆ ಬದಲಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಯಾದರೂ ಅಚ್ಚರಿಯಿಲ್ಲ” ಎಂದು ನುಡಿದರು.
“ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಎರಡನೇ ಅವತಾರ ತಾಳಿರುವ ಮಲ್ಲಿಕಾರ್ಜುನ ಖರ್ಗೆಯವರು ದೇಶದ ಎಐಸಿಸಿ ಅಧ್ಯಕ್ಷ ಸೇರಿದಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಜನಿಸಿ ದೇಶದ ಉನ್ನತ ಸ್ಥಾನ ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಬಣ್ಣಿಸಿದರು.
ಅಂಬೇಡ್ಕರ್ ಆಶಯವಿಲ್ಲದ ದೇಶ ಅನಾಥ :
ಅಂಬೇಡ್ಕರ್ ಅವರಿಗೆ ಯಾವುದೇ ಜಾತಿ, ಧರ್ಮದ ಚೌಕಟ್ಟಿನಲ್ಲಿ ಗ್ರಹಿಸಿದರೆ ಅಂಬೇಡ್ಕರ್ ಚಿಂತನೆ ಅರ್ಥವಾಗಲು ಸಾಧ್ಯವಿಲ್ಲ. ಆದರೆ ಕಾಣದ ಕೈಗಳು ಸಂವಿಧಾನದ ಕುತ್ತಿಗೆ ಕತ್ತರಿಸಲು ದೊಡ್ಡ ಪಿತೂರಿ ನಡೆಯುತ್ತಿದೆ. ನಾವು ಎಚ್ಚರವಹಿಸದಿದ್ದರೆ ಮುಂದಿನ ದಿನಗಳು ಇನ್ನೂ ಅಪಾಯಕಾರಿಯಾಗಿವೆ ಎಂದು ಎಂದು ಕೋಲಾರದ ಕವಿ, ಚಿಂತಕ ಗೊಲ್ಲಳ್ಳಿ ಶಿವಪ್ರಸಾದ್ ಆತಂಕ ವ್ಯಕ್ತಪಡಿಸಿದರು.
“ದೇಶದ ಜಲ್ವಂತ ಸಮಸ್ಯೆಗಳಾದ ಹಸಿವು, ಬಡತನ, ನಿರುದ್ಯೋಗ, ದೌರ್ಜನ್ಯ, ದಬ್ಬಾಳಿಕೆ ಅತ್ಯಾಚಾರ, ರೈತರ ಸಂಕಷ್ಟಗಳ ಕುರಿತು ಮಾತನಾಡಿ ಕೇಂದ್ರ ಸರ್ಕಾರ ನಮ್ಮನ್ನು ಗಡಿ ಮತ್ತು ಗುಡಿ ರಾಜಕಾರಣದಲ್ಲಿ ಮುಳುಗಿಸಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡದಿದ್ದರೆ ಗುಡಿ-ಗಡಿಗಳ ಒಳಗೆ ನಮ್ಮನ್ನು ನಾವು ನೇಣು ಹಾಕಿಕೊಳ್ಳಬೇಕಾಗುತ್ತದೆ. ಅಂತಹ ಭೀಕರ ವಾತಾವರಣ ಕೇಂದ್ರ ಬಿಜೆಪಿ ಸರ್ಕಾರ ನಿರ್ಮಾಣ ಮಾಡಿದೆ” ಎಂದು ಕಿಡಿಕಾರಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಹಾಗೂ ಸಮಾವೇಶ ಆಯೋಜಕರಾದ ರಮೇಶ ಡಾಕುಳಗಿ ಪ್ರಾಸ್ತಾವಿಕವಾಗಿ ಮಾತನಾಡಿ, “ದೇಶದ ಬಿಜೆಪಿ ಸರ್ಕಾರದಿಂದ ಸಂವಿಧಾನಕ್ಕೆ ಕುತ್ತು ತರುವ ನಿಟ್ಟಿನಲ್ಲಿ ಅನೇಕ ಷಡ್ಯತ್ರಗಳು ನಡೆಯುತ್ತಿವೆ. ಸಮಾಜದ ಸರ್ವರಿಗೂ ಒಳಿತು ಬಯಸುವ ಸಂವಿಧಾನ ಹಾಗೂ ಪ್ರಜಾಫ್ರಭುತ್ವ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಸಮಾವೇಶಗಳು ಆಯೋಜಿಸಲಾಗುತ್ತಿದೆ” ಎಂದು ಹೇಳಿದರು.
ಡಾ.ಜಯದೇವಿ ಗಾಯಕವಾಡ, ಪತ್ರಕರ್ತ ಸದಾನಂದ ಜೋಶಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಪಾಟೀಲ್, ಕಾಂಗ್ರೇಸ್ ಮುಖಂಡ ಧನರಾಜ ತಾಳಂಪಳ್ಳಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಆಣುದೂರ ಭಂತೆ ಜ್ಞಾನಸಾಗರ ಥೇರೋ ದಿವ್ಯ ಸಾನಿಧ್ಯ ವಹಿಸಿದರು, ದಸಂಸ ರಾಜ್ಯ ಸಂಘಟನಾ ಸಂಚಾಲಕ ರಾಜಕುಮಾರ್ ಬನ್ನೇರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ತಾಕತ್ತಿದ್ದರೆ ಬಿಜೆಪಿ ನಾಯಕರ ಆರೋಪಗಳ ತನಿಖೆಗೆ ಸತ್ಯಶೋಧನಾ ಸಮಿತಿ ಕಳಿಸಲಿ: ನಡ್ಡಾಗೆ ಸವಾಲೆಸೆದ ಸಿಎಂ
ಸಮಾವೇಶದಲ್ಲಿ ಪ್ರಮುಖರಾದ ಆನಂದ ದೇವಪ್ಪಾ, ಅಬ್ದುಲ್ ಮನ್ನಾನ್ ಸೇಟ್, ಪ್ರೊ. ವಿಠ್ಠಲದಾಸ ಪ್ಯಾಗೆ, ವೈಜಿನಾಥ ಯನಗುಂದಿ, ಪ್ರದೀಪ ನಾಟೇಕರ್, ಗಾಲಿಬ್ ಹಾಶ್ಮಿ, ರಘುನಾಥ ಗಾಯಕವಾಡ, ಸುನೀಲ ಮಾಡಗೂಳ, ಸುನಂದಾ ಸಿತಾಳಗೇರಾ, ಪುಣ್ಯವತಿ ಗುಪ್ತಾ, ಸುಮಂತ ಕಟ್ಟಿಮನಿ ಹಾಗೂ ಭಂತೆಜೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಸವರಾಜ ಸಾಗರ ಸ್ವಾಗತಿಸಿದರು, ಸಿದ್ಧಾರ್ಥ ಕಾಂಬಳೆ, ರಾಜಶೇಖರ್ ಶೇರಿಕಾರ ನಿರೂಪಿಸಿದರು, ಶಾಹುರಾಜ ಡಾಕುಳಗಿ ಸಂವಿಧಾನ ಪೀಠಿಕೆ ಓದಿಸಿದರು.