ಬೀದರ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ನಿಯಮಾನುಸಾರ ಮುಂಬಡ್ತಿ ನೀಡದೆ ಅನ್ಯಾಯ ಎಸಗಲಾಗುತ್ತಿದೆ ಎಂದು ಭೀಮಶಕ್ತಿ ಕಮಿಟಿ ಅಧ್ಯಕ್ಷ ಕಮಲಾಕರ ಹೆಗಡೆ ಆರೋಪಿಸಿ, ಬೀದರ್ ಜಿಲ್ಲಾಧಿಕಾರಿ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.
“ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಬಿ.ಕೆ. ಪವಿತ್ರ-2 ಪ್ರಕರಣದಲ್ಲಿ ಆದೇಶ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆದೇಶಗಳನ್ನು ಪಾಲಿಸುತ್ತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರಿಗೆ ಹಿಂಬಡ್ತಿ ನೀಡಿ ಅನ್ಯಾಯ ಮಾಡಲಾಗುತ್ತಿದೆ. ಕುಲಪತಿ ಸೇರಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಎಸ್‌ಸಿ ಎಸ್‌ಟಿ ಸಿಬ್ಬಂದಿಗೆ ಬಡ್ತಿ ನೀಡುವ ಸಂಬಂಧ ಸಮಾಜಕಲ್ಯಾಣ ಇಲಾಖೆಯ ಆಯುಕ್ತರು ವಿಶ್ವವಿದ್ಯಾಲಯಕ್ಕೆ ಹಲವು ಪತ್ರ ಬರೆದಿದ್ದಾರೆ. ಆದರೆ, ಕುಲಪತಿ ಡಾ.ಕೆ.ಸಿ.ವೀರಣ್ಣ ಅವರು ನಿರ್ಲಕ್ಷ್ಯ ತೋರಿ 16ಕ್ಕೂ ಹೆಚ್ಚು ನೌಕರರಿಗೆ ಕಾರಣವಿಲ್ಲದೆ ಹಿಂಬಡ್ತಿಗೊಳಿಸುವುದು ಸೇರಿದಂತೆ ಇತರೆ ದೌರ್ಜನ್ಯ ನಡೆಸುತ್ತಿದ್ದಾರೆ. ವಿವಿಯ ಐಎಎಚ್‌ವಿಬಿ ನಿರ್ದೇಶಕ ಡಾ.ರವೀಂದ್ರ ಹೆಗಡೆ ಅವರು ಎಸ್‌ಸಿ ಎಸ್ ಟಿ ಸಿಬ್ಬಂದಿ ಬಡ್ತಿ ಪಡೆಯುವುದನ್ನು ತಡೆಯುವುದಕ್ಕಾಗಿಯೇ ಕುಲಸಚಿವರಿಗೆ ತಪ್ಪು ಮಾಹಿತಿ ನೀಡಿ, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ” ಎಂದು ದೂರಿದ್ದಾರೆ.
“ಅರಣ್ಯ ಇಲಾಖೆಯಿಂದ ಕುಲಸಚಿವರ ಹುದ್ದೆಗೆ ನಿಯೋಜನೆಗೊಂಡಿರುವ ಐಎಫ್‌ಎಸ್ ಅಧಿಕಾರಿ ಎಸ್. ಶಿವಶಂಕರ ಅವರು ಎಸ್‌ಸಿ, ಎಸ್‌ಟಿ ಸಿಬ್ಬಂದಿ ಮುಂಬಡ್ತಿ ಹೊಂದುತ್ತಾರೆಂಬ ಕಾರಣಕ್ಕೆ ವಿಶ್ವವಿದ್ಯಾಲಯದಲ್ಲಿ ಸರ್ಕಾರದ ಆದೇಶ ಜಾರಿಗೊಳಿಸದೆ ಎಸ್‌ಸಿ, ಎಸ್ಟಿ ನೌಕರರ ಮೀಸಲಾತಿ ಹಕ್ಕು ಮೊಟಕುಗೊಳಿಸಿ ಅಧಿಕಾರ ದುರ್ಬಳಕೆ ಮಡಿಕೊಂಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಮ ಮಂದಿರ ಕಟ್ಟುವುದರಿಂದ ಉದ್ಯೋಗ, ಶಿಕ್ಷಣ ಸಿಗುತ್ತಾ?: ಮಾವಳ್ಳಿ ಶಂಕರ
ಬಿ.ಕೆ.ಪವಿತ್ರಾ-2 ಪ್ರಕರಣದಲ್ಲಿನ ನ್ಯಾಯಾಲಯದ ಆದೇಶ, ಆಯೋಗದ ಸೂಚನೆ ಮತ್ತು ಸರ್ಕಾರದ ಆದೇಶಗಳನ್ನು ವಿಶ್ವವಿದ್ಯಾಲಯದಲ್ಲಿ ಧಿಕ್ಕರಿಸಲಾಗುತ್ತಿದೆ. ದಲಿತ ಸಿಬ್ಬಂದಿಗೆ ಹುದ್ದೆಗೆ ಅನುಗುಣವಾಗಿ ಕೆಲಸ ನೀಡದೆ ದೌರ್ಜನ್ಯ ಎಸಗಲಾಗುತ್ತಿದೆ. ಬಡ್ತಿ ನೀಡದೆ ಅನ್ಯಾಯ ಮಾಡುತ್ತಿರುವ ವಿವಿ ಕುಲಪತಿ, ಕುಲಸಚಿವರು ಸೇರಿ ಸಂಬಂಧಿಸಿದ ಎಲ್ಲ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸಬೇಕು. ಅನ್ಯಾಯಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರಿಗೆ ನ್ಯಾಯ ಒದಗಿಸಬೇಕೆಂದು ಕೋರಿದ್ದಾರೆ.