ಬಸ್ ಸೇವೆಗೆ ಒತ್ತಾಯಿಸಿ ಜಗಳೂರು ತಾಲೂಕು ಕಚೇರಿ ಬಳಿ ತಾಲೂಕಿನ ಗೌಡಗೊಂಡನಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಕರುನಾಡ ನವ ನಿರ್ಮಾಣ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಶಿರಸ್ತೆದಾರ್ ಚಂದ್ರಪ್ಪ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಕರುನಾಡ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಜೆಎಚ್‌ಎಮ್ ಹೊಳೆ, “ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಆದರೂ, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸುಮಾರು ಮೂರು ನಾಲ್ಕು ಕಿಲೋ ಮೀಟರ್ ನೆಡೆದುಕೊಂಡು ಹೋಗುವ ಪರಿಸ್ಥಿತಿ ಇರುವುದು ದುರಂತ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸುಮಾರು 50ರಿಂದ 60 ಜನ ವಿದ್ಯಾರ್ಥಿಗಳು ಪದವಿಪೂರ್ವ, ಪದವಿ, ವೃತ್ತಿಪರ ಶಿಕ್ಷಣ ಪಡೆಯಲು ಪ್ರತಿನಿತ್ಯ ಜಗಳೂರು ಪಟ್ಟಣಕ್ಕೆ ಬರುತ್ತಿದ್ದಾರೆ. ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ. ಇನ್ನಾದರೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕೇವಲ ಜಗಳೂರು ದಾವಣಗೆರೆ ಮಾರ್ಗದಲ್ಲಿ ಬಸ್ಸುಗಳನ್ನ ಸಂಚಾರ ಒದಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಗಾಣಗಟ್ಟೆ ಮಾರ್ಗದಲ್ಲಿ ಸಂಚಾರ ಮಾಡುವ ಸರ್ಕಾರಿ ಬಸ್ಸನ್ನು ಗೌರಿಪುರ, ಕ್ಯಾಸೆನಹಳ್ಳಿ, ತುಂಬಿನಕಟ್ಟೆ, ಮರಿಕಟ್ಟೆ ಹಾಗೂ ಗೌಡಗೊಂಡನಹಳ್ಳಿ ಮಾರ್ಗದಲ್ಲಿ ಸಂಚಾರ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಿಧ್ಯಾರ್ಥಿ ಜಯಂತ್, ಅಜ್ಜಯ್ಯ, ಮಂಜುನಾಥ್, ಮನು, ಪಾತಲಿಂಗಪ್ಪ, ಮಧು, ಸಂಜನ, ಮೇಘಾನ, ಲತಾ, ಲಕ್ಷ್ಮೀ, ರಮ್ಯಾ, ರೇಖಾ, ಮೇಘಾನ, ಚಂದನ, ಮಧು, ಚೇತನ ಇತರರು ಇದ್ದರು.