ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುಡಬೂಳ ಗೇಟ್ ಹತ್ತಿರ ಕೆಟ್ಟು ನಿಂತಿದ್ದ ಲಾರಿಗೆ ಹಿಂದುಗಡೆಯಿಂದ ಬಂದ ಬೈಕ್ ಸವಾರ ಢಿಕ್ಕಿ ಹೊಡೆದು ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ.
ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಪ್ರಕಾಶ (28) ಮೃತಪಟ್ಟ ಯುವಕ. ಯಶವಂತಪುರ ರೈಲಿನಲ್ಲಿ ತೆರಳುತ್ತಿದ್ದ ಸಂಬಂಧಿಕರಿಗೆ ಭೇಟಿಯಾಗಲು ದಂಡೋತಿ ಗ್ರಾಮದಿಂದ ಚಿತ್ತಾಪುರ ರೈಲು ನಿಲ್ದಾಣಕ್ಕೆ ಬೈಕ್ ನಲ್ಲಿ ಬರುವ ವೇಳೆ ಈ ಘಟನೆ ಸಂಭವಿಸಿದೆ.
ಸ್ಥಳಕ್ಕೆ ಚಿತ್ತಾಪುರ ಪೊಲೀಸ್ ಠಾಣೆ ಪಿಎಸ್ಐ ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳಾದ ಹುಸೇನ್ ಪಾಶಾ, ಶಿವಯ್ಯ ಸ್ವಾಮಿ, ಮುಕ್ತುಂ ಪಟೇಲ್, ಮಂಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ತಾಪುರದಿಂದ ಟೆಂಗಳಿ ಕ್ರಾಸ್ ಹೋಗುವ ಮುಖ್ಯ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಿಸುವ ಉದ್ದೇಶದಿಂದ ಹಲವು ಕಡೆ ಹಂಪ್ಸ್ ಹಾಕಿದ್ದಾರೆ. ಆದರೆ ಹಂಪ್ಸ್ ಗುರುತಿಸಲು ಸೂಚಕ ಫಲಕ ಹಾಕದಿರುವ ಕಾರಣ ಹೆಚ್ಚಿನ ಅಪಘಾತ ಸಂಭವಿಸುತ್ತಿವೆ. ಪ್ರತಿಭಾವಂತ ಸ್ನೇಹಿತನ ಸಾವಿಗೆ ನೇರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ಹೊಣೆ ಎಂದು ಮೃತ ಪ್ರಕಾಶ್ ಓದುತ್ತಿದ್ದ ಕಾಲೇಜಿನ ಸ್ನೇಹಿತೆ ಗಂಗಾ ಹಿರೇಮಠ ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಮ ಮಂದಿರ ಕಟ್ಟುವುದರಿಂದ ಉದ್ಯೋಗ, ಶಿಕ್ಷಣ ಸಿಗುತ್ತಾ?: ಮಾವಳ್ಳಿ ಶಂಕರ
ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಚಕ ಫಲಕ ಮತ್ತು ಹಂಪ್ಸ್ ಗಳಿಗೆ ಬಣ್ಣ ಬಳೆದು ಅಪಘಾತ ತಪ್ಪಿಸಬೇಕು ಅವರು ಮನವಿ ಮಾಡಿದ್ದಾರೆ.
ವರದಿ ಮಾಹಿತಿ : ಅನಂತ