“ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಕೂಟವು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವಾಗಲೂ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (ವಿಬಿಎ)ಯನ್ನು ನಿರ್ಲಕ್ಷಿಸಿದೆ” ಎಂದು ವಿಬಿಎ ಆಕ್ರೋಶ ಹೊರಹಾಕಿದೆ.
“ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಮಹತ್ವವನ್ನು ಇತಿಹಾಸದಿಂದ ಕಲಿಯಬೇಕು. ವಿವಿಧ ದೇಶಗಳ ಮೈತ್ರಿಯಿಂದಾಗಿ ಹಿಟ್ಲರ್ ಸೋತನು. ಮಹಾ ವಿಕಾಸ್ ಅಘಾಡಿಯು ಇನ್ನೂ ಏಕೆ ವಿಬಿಎಯನ್ನು ಮೈತ್ರಿಗೆ ಆಹ್ವಾನಿಸಿಲ್ಲ ಎಂಬುದು ಮಹಾರಾಷ್ಟ್ರದ ಜನರಿಗೆ ದೊಡ್ಡ ನಿಗೂಢವಾಗಿಯೇ ಉಳಿದಿದೆ” ಎಂದು ವಿಬಿಎ ಆಶ್ಚರ್ಯ ವ್ಯಕ್ತಪಡಿಸಿದೆ.
“ವಿಬಿಎಗೆ ಇರುವ ಜನಪ್ರಿಯತೆ ಕುರಿತು ಎಂವಿಎ ಕುರುಡಾಗಿದೆ, ನಮ್ಮ ಶಕ್ತಿಯನ್ನು ಅವರು ನೋಡಿಲ್ಲ ಅಥವಾ ಅವರ ಅಹಂ ನಮ್ಮನ್ನು ಆಹ್ವಾನಿಸಲು ತಡೆಯಾಗಿ ನಿಂತಿದೆ. ಇಲ್ಲವಾಗಿದ್ದರೆ ತಾರತಮ್ಯ ಮತ್ತು ಅಂಚಿನಲ್ಲಿರುವ ಜನರನ್ನು ಪ್ರತಿನಿಧಿಸುವ ಪಕ್ಷದ ಸಹಾಯವನ್ನು ಪಡೆಯಲು ಈ ಎರಡೂ ಪಕ್ಷಗಳು ಹೆಮ್ಮೆಪಡುತ್ತಿದ್ದವು” ಎಂದಿದೆ.
“ನಮ್ಮ ಇತ್ತೀಚಿನ ಸಮಾರಂಭದಲ್ಲಿ ಸೇರಿದ್ದ ಜನರನ್ನು ಇಡೀ ಮಹಾರಾಷ್ಟ್ರವೇ ನೋಡಿದೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ನಿಜವಾಗಿಯೂ ಬಿಜೆಪಿಯನ್ನು ಸೋಲಿಸಲು ಬಯಸಿದರೆ, ಅವರು ತಮ್ಮ ಅಹಂಕಾರವನ್ನು ಬದಿಗಿಟ್ಟು ಅಧಿಕೃತವಾಗಿ ವಿಬಿಎಯನ್ನು ಎಂವಿಎಗೆ ಆಹ್ವಾನಿಸಬೇಕು” ಎಂದು ತಿಳಿಸಿದೆ.
“ಒಂದು ಪಕ್ಷದ ಅಹಂ ಮತ್ತು ಮೈತ್ರಿಯಲ್ಲಿನ ವಿಫಲತೆ ಏನು ಮಾಡಬಹುದೆಂದು ನಾವೆಲ್ಲರೂ ನೋಡಿದ್ದೇವೆ; ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಚುನಾವಣೆಗಳು ಇತ್ತೀಚಿನ ಉದಾಹರಣೆಗಳಾಗಿವೆ” ಎಂದು ಪಕ್ಷ ಎಚ್ಚರಿಸಿದೆ.
ಈ ವರ್ಷದ ಆರಂಭದಲ್ಲಿ ಪ್ರಕಾಶ್ ಅಂಬೇಡ್ಕರ್ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಸರಣಿ ಸಭೆಗಳನ್ನು ನಡೆಸಿ ಮೈತ್ರಿಯನ್ನು ಘೋಷಿಸಿದ್ದರು. ಆದಾಗ್ಯೂ, ಮಹಾ ವಿಕಾಸ್ ಅಘಾಡಿಯಲ್ಲಿ ವಿಬಿಎ ಸೇರಿಕೊಳ್ಳಲು ಸಾಧ್ಯವಾಗಿಲ್ಲ.
ಇದನ್ನೂ ಓದಿರಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತ ’ಸಾಕ್ಷ್ಯಚಿತ್ರ’ ಪ್ರದರ್ಶನ ಇಂದು