ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರ 68ನೇ ಹುಟ್ಟು ಹಬ್ಬದ ಪ್ರಯುಕ್ತ ಅವರ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ , ಅವರ ನಿವಾಸದಲ್ಲಿ ಉಪಹಾರ ಸೇವಿಸಿದರು.
ಈ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರ ದಿಂದ ಶೆಟ್ಟರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯ ಕುರಿತು ಸುದ್ದಿಗಾರರು ಕೇಳಲಾದ ಪ್ರಶ್ನೆಗೆ, ಶೆಟ್ಟರ್ ಕೂಡ ಆಕಾಂಕ್ಷಿ ಎಂದು ನಾವು ಭಾವಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ ತಕ್ಷಣ ಜಗದೀಶ್ ಶೆಟ್ಟರ್ ಮಧ್ಯ ಪ್ರವೇಶಿಸಿ ನಾನು ಆಕಾಂಕ್ಷಿಯಲ್ಲ ಎಂದು ಹೇಳಿದರು.
“ಶಾಸಕರು, ಹಿಂದಿನ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಆಧರಿಸಿ ಟಿಕೆಟ್ ನೀಡಲಾಗುವುದು. ಪ್ರತಿ ಜಿಲ್ಲೆಗೆ ನಿಯೋಜಿಸಲಾದ ಸಚಿವರು ಮೂರು ಆಕಾಂಕ್ಷಿಗಳ ಹೆಸರನ್ನು ನೀಡಿ, ಹೆಚ್ಚು ಸೂಕ್ತರನ್ನು ಆಯ್ಕೆ ಮಾಡಲಾಗುವುದು” ಎಂದು ಸಿಎಂ ಹೇಳಿದರು.
”ಈ ಬಾರಿಯೂ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. ಬಿಜೆಪಿಯವರು ತಮಗೆ ಮುಸ್ಲಿಮರ ಮತಗಳ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಮುಸ್ಲಿಮರು ಭಾರತೀಯರಲ್ಲವೇ? ನಮ್ಮದು ಬಹುಸಂಸ್ಕೃತಿಯ ದೇಶವಾಗಿದೆ ಮತ್ತು ಎಲ್ಲ ನಾಗರಿಕರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ಸಿದ್ದರಾಮಯ್ಯ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈದಿನ ಸಂಪಾದಕೀಯ | ಉತ್ತರದಲ್ಲಿ ನಡೆದ ಅಧಿವೇಶನದಲ್ಲಿ ಸಿಕ್ಕ ಉತ್ತರವೇನು?
“ಜಾತಿ ಗಣತಿಯ ವರದಿಯ ತಿರಸ್ಕಾರದ ಬೇಡಿಕೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು, “ವರದಿಯಲ್ಲಿ ಏನಿದೆ ಎಂದು ಯಾರಿಗೂ ತಿಳಿದಿಲ್ಲ ಮತ್ತು ನನಗೂ ತಿಳಿದಿಲ್ಲ. ಊಹೆಯ ಆಧಾರದ ಮೇಲೆ ಮಾತನಾಡುತ್ತಿದ್ದಾರೆ” ಎಂದು ಹೇಳಿದರು.
“ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಶಾಲಾ ಮಕ್ಕಳನ್ನು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಹೇಳಿದರು.
“ಮಂಡಳಿಗಳು ಮತ್ತು ನಿಗಮಗಳಿಗೆ ನೇಮಕಾತಿಗಳನ್ನು ತಕ್ಷಣವೇ ಮಾಡಲಾಗುವುದು. ಮೊದಲ ಹಂತದಲ್ಲಿ ಶಾಸಕರಿಗೆ ಅವಕಾಶ ಕಲ್ಪಿಸಲಾಗುವುದು ಮತ್ತು ಎರಡನೇ ಹಂತದಲ್ಲಿ ಪಕ್ಷದ ಕಾರ್ಯಕರ್ತರನ್ನು ನೇಮಿಸಲಾಗುವುದು” ಎಂದು ಅವರು ಹೇಳಿದರು.