ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ನನಸಾಗುವ ಕಾಲ ಹತ್ತಿರ ಬಂದಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಭರವಸೆ ಸುಳ್ಳಾಗುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಅವರಿಂದು (ಡಿ.17) ನಗರದಲ್ಲಿ ಮಾದಿಗ ಮುನ್ನಡೆ, ಮಾದಿಗರ ಆತ್ಮಗೌರವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಹತ್ತಾರು ವರ್ಷಗಳಿಂದ ಸಮಾಜದ ಜನರು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂದು ಸುದೀರ್ಘ ಹೋರಾಟ ನಡೆಸಿದ್ದಾರೆ. ಆದರೆ, ಇಲ್ಲಿಯವರೆಗೆ ನಡೆಸಿದ ಸರ್ಕಾರಗಳು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಮುಂದಾಗಲೇ ಇಲ್ಲ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಒಳ ಮೀಸಲಾತಿಗೆ ಬೇಕಿರುವ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಜಾರಿಗೊಳಿಸಲಾಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಪ್ರಧಾನಿ ನರೇಂದ್ರ ಮೋದಿಯವರು ಬದ್ಧವಾಗಿದ್ದಾರೆ ರಾಜ್ಯ ಸರ್ಕಾರವೂ ಕೂಡ ಕಾನೂನಾತ್ಮಕವಾಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಒಳ ಮೀಸಲಾತಿ ಜಾರಿಗೆ ಮುಂದಾಗಬೇಕು ಎಂದರು.
ಮಾದಿಗ ಸಮಾಜದ ಮುಖಂಡ ವಾದಿರಾಜ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಸದಾಶಿವ ಆಯೋಗ ರಚಿಸಿ ಅನುದಾನ ನೀಡಿ ವರದಿ ಸಿದ್ದಪಡಿಸಲಾಯಿತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಸದಾಶಿವ ವರದಿ ಜಾರಿಗೆ ಹಿಂದೇಟು ಹಾಕಿದರು. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಾಧುಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಿ ಶೇ. 17ರಷ್ಟು ಒಳ ಮೀಸಲಾತಿ ವರ್ಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಪ್ರಧಾನ ಮಂತ್ರಿ ಮೋದಿ ಅವರು ಒಳ ಮೀಸಲಾತಿ ಜಾರಿಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.
2004ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಸದಾಶಿವ ಆಯೋಗ ರಚಿಸಿ 11 ಕೋಟಿ ರೂ. ನೀಡಿದರು. ಅದು ವರದಿ ನೀಡಿದ ಬಳಿಕ ಮುಖ್ಯಮಂತ್ರಿಗಳು ವರದಿ ಸ್ವೀಕಾರ ಮಾಡಿದರು. ನಂತರದ ಕಾಂಗ್ರೆಸ್ ಸರ್ಕಾರದಲ್ಲಿ ಅಂದಿನಿಂದ ಇಲ್ಲಿಯವರೆಗೆ ಯಾವ ಸರ್ಕಾರಗಳೂ ಜಾರಿಗೆ ಮುಂದಾಗಲಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಜಾರಿಗಾಗಿ ಮಾಧುಸ್ವಾಮಿ ನೇತೃತ್ವದಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದರು.
ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಪ.ಜಾತಿಗೆ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ 17ಕ್ಕೆ ಹೆಚ್ಚಳ ಮಾಡಿದರು. ಸರ್ಕಾರ ಆದೇಶ ನೀಡಿದೆ; ರಾಜ್ಯದಲ್ಲಿ ಸಮಾಜದ ಜನರಿಗೆ ಶೇ.17ರಷ್ಟು ಶಿಕ್ಷಣದಲ್ಲಿ ಮೀಸಲಾತಿ ದೊರೆತಿದೆ. ಮಾಧುಸ್ವಾಮಿ ಸಮಿತಿಯು ಸದಾಶಿವ ಆಯೋಗದ ಮೂಲ ಆಶಯದಂತೆ ಶೇ.17ರಷ್ಟು ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಮಾಡಿ ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿಸಿದರು.
ಸಮಾಜದ ಮುಖಂಡ ಎಂ.ವಿರೂಪಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ನಾಯಕತ್ವದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಮುಂದಾಗಲಿಲ್ಲ. ರಾಜ್ಯದಲ್ಲಿ ಸಂಪುಟ ಸಭೆಯಲ್ಲಿ ಮಾಧುಸ್ವಾಮಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ವರದಿ ನೀಡಿದ್ದು ಕೇಂದ್ರಕ್ಕೆ ಸಲ್ಲಿಸಿದ್ದು ಬಿಜೆಪಿ ಸರ್ಕಾರ ಎಂದರು.
1965ರಿಂದ ಇಂದಿರಾಗಾಂಧಿ ಅವರು ಸಮಾಜವನ್ನು ಮೂಲೆ ಗುಂಪು ಮಾಡಿದ್ದರು. ಸದಾಶಿವ ವರದಿ ಅವೈಜ್ಞಾನಿಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದು, ಅವರಿಗೆ ಜಾರಿಯ ಉದ್ದೇಶವಿಲ್ಲ. ಅವರು ಸಮಾಜದಲ್ಲಿ ಒಡಕು ಉಂಟು ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.
ಸಮಾಜದ ಸಂಘಟನೆಯನ್ನು ಕುಗ್ಗಿಸುವ ಕೆಲಸ ಮಾಡಿ ಸಮಾಜದಲ್ಲಿ ಹತ್ತಾರು ಸಂಘಟನೆ ಆಗಿದೆ. ಮಂದಕೃಷ್ಣ ಮಾದಿಗ ಅವರಿಗೆ ಸಾಕಷ್ಟು ಆಸೆ ಆಮಿಸೆ ತೋರಿಸಿದರು. ಆದರೆ, ಅವರು ಸಮಾಜಕ್ಕೆ ಮೀಸಲಾತಿ ಒದಗಿಸಲು ಹೋರಾಟಕ್ಕೆ ಮುಂದಾದರು. ಕಾಂಗ್ರೆಸ್ ಸರ್ಕಾರ ಅಧಿವೇಶನದಲ್ಲಿ ಚರ್ಚೆ ಮಾಡದೇ ನಿರ್ಲಕ್ಷ್ಯ ವಹಿಸಿತು. ಮಂದಕೃಷ್ಣ ಮಾದಿಗ ಅವರು ರಾಷ್ಟ್ರ ಮಟ್ಟದಲ್ಲಿ ಸಮಾವೇಶ ಮಾಡಿ ಪ್ರಧಾನ ಮಂತ್ರಿಯವರನ್ನು ಕರೆಸಿದ್ದರು. ಮೋದಿ ಅವರು ವೇದಿಕೆಯಲ್ಲಿ ಒಳ ಮೀಸಲಾತಿ ಮಾಡಿಕೊಡುವುದಾಗಿ ಹೇಳಿದ್ದಾರೆ.
ಅಮಿತ್ ಶಾ ಅವರು ಮೀಸಲಾತಿ ನೀಡುವ ಕುರಿತು ತಿಳಿಸಿದ್ದಾರೆ. ಮೀಸಲಾತಿ ವರ್ಗೀಕರಣ ಯಾರು ಮಾಡುತ್ತಾರೆ ಅವರ ಜೊತೆ ಇರುತ್ತೇವೆ. ಮೋದಿ, ಅಮಿತ್ ಶಾ ಮಾತು ಕೊಟ್ಟಿದ್ದು ಅದನ್ನು ಉಳಿಸಿಕೊಂಡು ಹೋದರೆ ಸಮಾಜದ ಜನ ಮುಂದಿನ ದಿನಗಳಲ್ಲಿ ಜೊತೆಗೆ ಇರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಶಿವರಾಜ ಪಾಟೀಲ್, ಮುಖಂಡರಾದ ರಾಮಣ್ಣ, ಪೂಜಪ್ಪ, ಡಾ.ಶಿವಪ್ರಸಾದ್ ಚಿಕ್ಕಮಂಗಳೂರು, ಮಹಾಲಕ್ಷ್ಮೀ, ಪಾರ್ಥಸಾರಥಿ, ನಾಗಲಿಂಗಪ್ಪ, ಮೊರಾರ್ಜಿ, ರವಿಂದ್ರ ಜಲ್ದಾರ್, ಬೂದೆಪ್ಪ, ಪಿ.ಯಲ್ಲಪ್ಪ, ತಿಮ್ಮಪ್ಪ ಫಿರಂಗಿ ಸೇರಿದಂತೆ ಅನೇಕರು ಇದ್ದರು.