ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ಐವರು ನೀರುಪಾಲಾದ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಭೈರುಂಬೆ ಸಮೀಪದ ಶಾಲ್ಮಲಾ ನದಿಯ ಭೂತನಗುಂಡಿ ಪ್ರದೇಶದಲ್ಲಿ ಭಾನುವಾರ(ಡಿ.17) ಸಂಜೆ ನಡೆದಿದೆ.
ಶಿರಸಿ ನಗರದ ರಾಮನಬೈಲ್‌ನ ನಿವಾಸಿ ಮುಹಮ್ಮದ್ ಸಲೀಂ (44), ಉಮರ್ ಸಿದ್ದೀಕ್ (14), ನಾಬಿಲ್ (22), ನಾದಿಯಾ ಶೇಖ್ (22) ಹಾಗೂ ಕಸ್ತೂರಬಾ ನಗರದ ಮಿಸಬಾ (21) ಮೃತಪಟ್ಟ ದುರ್ದೈವಿಗಳು ಎಂದು ತಿಳಿದುಬಂದಿದೆ.
ಕುಟುಂಬದ 20 ಮಂದಿ ಸದಸ್ಯರು ಸೇರಿ ಪಿಕ್‌ನಿಕ್‌ಗಾಗಿ ಶಾಲ್ಮಲಾ ನದಿ ಪಾತ್ರದ ಭೂತನಗುಂಡಿ ಎಂಬ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ನಾದಿಯಾ ಶೇಖ್ ಹಾಗೂ ನಾಬಿಲ್ ಎಂಬುವವರು ಆಕಸ್ಮಿಕವಾಗಿ ನೀರಲ್ಲಿ ಬಿದ್ದ ಸಂದರ್ಭದಲ್ಲಿ ಅವರನ್ನು ಉಳಿಸಲು ಸಮೀಪವಿದ್ದ ಸಲೀಂ, ಉಮರ್ ಹಾಗೂ ಮಿಸಬಾ ನೀರಿನ ಗುಂಡಿಗೆ ಧಾವಿಸಿದ್ದರು. ಯಾರಿಗೂ ಈಜು ಬಾರದ ಕಾರಣ ರಕ್ಷಣೆಗೆ ತೆರಳಿದವರೂ ಗುಂಡಿಯ ಆಳಕ್ಕೆ ಹೋಗಿದ್ದಾರೆಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಡಿ.28ಕ್ಕೆ ದೇವದಾಸಿ ಮಹಿಳೆಯರ ಬೇಡಿಕೆ ಈಡೇರಿಕೆಗಾಗಿ ‘ಬೆಂಗಳೂರು ಚಲೋ’
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಗಣೇಶ ಕೆ ಎಲ್, ಸಿಪಿಐ ಪಿ. ಸೀತಾರಾಮ, ಪಿಎಸ್ಐ ಪ್ರತಾಪ, ಅಗ್ನಿ ಶಾಮಕದಳದ ಸಿಬ್ಬಂದಿ, ಗೋಪಾಲ ಗೌಡ ನೇತೃತ್ವದ ಲೈಫ್ ಗಾರ್ಡ್ ತಂಡ, ಸ್ಥಳೀಯ ಈಜುಗಾರರು ಆಗಮಿಸಿದ್ದು, ಕಾಣೆಯಾದವರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.