ಕೋಲಾರ ಜಿಲ್ಲೆಯ ಮಾಲೂರು ಸಮೀಪದ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ನಿಲಯದ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಘಟನೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಈ ಘಟನೆಯ ವಸ್ತುಸ್ಥಿತಿ ಅಧ್ಯಯನಕ್ಕೆ ಐವರ ಸಮಿತಿಯೊಂದನ್ನು ರಚಿಸಿ, ಪ್ರಕಟಣೆ ಹೊರಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಈ ಸಮಿತಿಯಲ್ಲಿ ಇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಬೆಳಗಾವಿಯ ಮಹಿಳಾ ದೌರ್ಜನ್ಯದ ಬೆನ್ನಲೇ
ಮಕ್ಕಳ ಮೇಲಿನ ದೌರ್ಜನ್ಯದ ಘಟನೆ ಕೋಲಾರದ ಮಾಲೂರು ಯಲುವಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ನಡೆದಿರುವುದು ನೋಡಿದರೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಹಳಿತಪ್ಪಿದ ಆಡಳಿತದಲ್ಲಿ ಮಹಿಳೆಯರು ಹಾಗೂ ಮಕ್ಕಳು ಸುರಕ್ಷಿತವಾಗಿರಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದು ಬಿಂಬಿತವಾಗುತ್ತಿದೆ.… pic.twitter.com/ZxLp2O2TLl— Vijayendra Yediyurappa (@BYVijayendra) December 17, 2023
ಮಲದ ಗುಂಡಿ ಸ್ವಚ್ಛತೆ, ಮಕ್ಕಳಿಗೆ ಶಿಕ್ಷೆ ಕೊಡುವುದು ಸೇರಿದಂತೆ ಅಲ್ಲಿನ ಸಮಸ್ಯೆಗಳನ್ನೂ ಈ ಸಮಿತಿ ಪರಿಶೀಲಿಸಲಿದೆ. ಸ್ಥಳಕ್ಕೆ ಭೇಟಿ ನೀಡಿ, ವಾಸ್ತವಾಂಶಗಳನ್ನು ಪರಿಶೀಲಿಸಿ ರಾಜ್ಯಾಧ್ಯಕ್ಷರಿಗೆ ಸಮಿತಿ ವರದಿ ನೀಡಲಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏನಿದು ಘಟನೆ?
ಕೋಲಾರ ಜಿಲ್ಲೆ ಮಾಲೂರು ತಾಲೂಕು ಯಲುವಹಳ್ಳಿ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿ, ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ, ಸ್ವಚ್ಫತೆ ಮಾಡಿಸಲಾಗಿತ್ತು.
ಇದನ್ನು ಓದಿದ್ದೀರಾ? ಕೋಲಾರ | ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿದ ಪ್ರಾಂಶುಪಾಲೆ, ಶಿಕ್ಷಕ ಬಂಧನ; ವಿದ್ಯಾರ್ಥಿಗಳಿಂದಲೇ ಪ್ರತಿಭಟನೆ
ಘಟನೆಗೆ ಸಂಬಂಧಿಸಿ ವಸತಿ ಶಾಲೆಯ ಪ್ರಾಂಶುಪಾಲೆ ಭಾರತಮ್ಮ ಮತ್ತು ಚಿತ್ರಕಲಾ ಶಿಕ್ಷಕ ಮುನಿಯಪ್ಪ ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಸೇವೆಯಿಂದ ಮೂವರನ್ನು ಅಮಾನತುಗೊಳಿಸಿ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಆದೇಶ ಹೊರಡಿಸಿದ್ದರು.