ಬೆಳಗಾವಿಯ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣವನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ. ಇದೇ ಪ್ರಕರಣದ ವಿಚಾರಣೆ ವೇಳೆ ಈ ಹಿಂದೆ, ‘ಇದು ದುಶ್ಯಾಸನರ ರಾಜ್ಯ’ ಎಂದು ಕಿಡಿಕಾರಿದ್ದ ಹೈಕೋರ್ಟ್, ಈಗ “ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಆಕೆಯ ನೆರವಿಗೆ ಧಾವಿಸದೆ, ಮೂಕಪ್ರೇಕ್ಷಕರಂತೆ ನಿಂತಿದ್ದ ಗ್ರಾಮದ ಜನರಿಂದ ದಂಡ ಸಂಗ್ರಹಿಸಬೇಕು. ಆ ಮೊತ್ತವನ್ನು ಸಂತ್ರಸ್ತೆಗೆ ನೀಡಬೇಕು” ಎಂದು ತಾಕೀತು ಮಾಡಿದೆ.
ಗ್ರಾಮದ ಯುವಕ-ಯುವತಿ ಪರಸ್ಪರ ಪ್ರೀತಿಸಿದ್ದರು. ಡಿಸೆಂಬರ್ 10ರ ರಾತ್ರಿ ಊರು ಬಿಟ್ಟು ಹೋಗಿದ್ದರು. ಇದರಿಂದ ವಿಚಲಿತಗೊಂಡಿದ್ದ ಯುವತಿಯ ಕುಟುಂಬಸ್ಥರು ಅಂದು ರಾತ್ರಿ ಯುವಕನ ಮನೆಗೆ ನುಗ್ಗಿ, ಆತನ ತಾಯಿಯನ್ನು ಎಳೆದೊಯ್ದು, ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದರು.
ಘಟನೆ ಸಂಬಂಧ ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಪ್ರಸನ್ನ ಬಿ ವರಾಳೆ ಮತ್ತು ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ. ಘಟನೆಯ ವೇಳೆ ಮಹಿಳೆಯ ನೆರವಿಗೆ ಬಾರದ ಜನರ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.
“ಘಟನೆ ವೇಳೆ ಮೂಕರಂತೆ ನಿಂತಿದ್ದ ವರ್ತನೆಗೆ ಬ್ರಿಟಿಷರು ಪುಂಡಕಂದಾಯ ಎಂಬ ಹೆಸರಿನಲ್ಲಿ ತೆರಿಗೆ ವಿಧಿಸುತ್ತಿದ್ದರು. ವಿಲಿಯಮ್ ಬೆಂಟಿಂಕ್ ವೈಸ್‌ರಾಯ್ ಆಗಿದ್ದಾಗ ಅಂತಹ ತೆರಿಗೆ ಇತ್ತು. ಈ ಘಟನೆಯಲ್ಲಿ ಮೂಕರಂತೆ ನೋಡುತ್ತ ನಿಂತಿದ್ದ ಗ್ರಾಮದ ಜನರಿಂದ ದಂಡ ಸಂಗ್ರಹಿಸಿ, ಸಂತ್ರಸ್ತೆಗೆ ನೀಡಬೇಕು” ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿ ಶನಿವಾರ ಆದೇಶ ಹೊರಡಿಸಿದೆ. ಸಿಐಡಿ ತಂಡ ಸೋಮವಾರ ಬೆಳಗಾವಿಗೆ ತೆರಳಿದ್ದು, ತನಿಖೆ ಆರಂಭಿಸಿದೆ.